ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಈ ಪರ್ಯಾಯೋತ್ಸವಕ್ಕೆ ವಿದೇಶದ ಅತಿಥಿಗಳೂ ಬಂದಿದ್ದಾರೆ ಎಂದರೆ, ಭಾರತ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕವಾಗಿ ವಿಶ್ವಗುರುವಾಗುವ ಪಥದಲ್ಲಿದೆ ಎಂಬುದು ಸಾಬೀತಾಗುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ತಮ್ಮೆಲ್ಲ ಕಷ್ಟಗಳನ್ನು ಕೃಷ್ಣನಿಗೆ ಅರ್ಪಿಸುತ್ತೇನೆ, ಆದ್ದರಿಂದ ತಾವು ಸದಾ ಹಸನ್ಮುಖಿಯಾಗಿರುತ್ತೇವೆ ಎಂದು ಶ್ರೀಪಾದರು ಹೇಳಿದ್ದಾರೆ. ಇದು ರಾಜಕಾರಣಿಗಳಿಗೂ ಮಾದರಿಯಾಗಬೇಕಾಗಿದೆ ಎಂದರು.
ಮುಂದಿನ 2 ವರ್ಷಗಳ ಪರ್ಯಾಯಕ್ಕೆ ರಾಜ್ಯ ಸರ್ಕಾರದಿಂದ ಪೂರ್ಣ ಬೆಂಬಲ ನೀಡಲಾಗುತ್ತದೆ, ಮಠದ ಯಾವುದೇ ಕೆಲಸಗಳನ್ನು ಜಿಲ್ಲಾಡಳಿತದ ಮೂಲಕ ಮಾಡಿಕೊಡುತ್ತೇನೆ ಎಂದವರು ಭರವಸೆ ನೀಡಿದರು.ಪರ್ಯಾಯೋತ್ಸವ ಪ್ರಜಾತಂತ್ರಕ್ಕೆ ಮಾದರಿ: ಶೋಭಾ
ಪುತ್ತಿಗೆ ಶ್ರೀಗಳು ಸದಾ ಹೊಸತನ್ನು ಯೋಚಿಸುತ್ತಾರೆ, ಆದ್ದರಿಂದ ಕಟ್ಟಳೆಗಳನ್ನು ಮೀರಿ ವಿದೇಶಕ್ಕೆ ಹೋಗಿ ಕೃಷ್ಣನ ಪರಿಚಯ ಇಲ್ಲದವರಲ್ಲಿಯೂ ಕೃಷ್ಣನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಶ್ಲಾಘಿಸಿದರು.ನಮ್ಮಲ್ಲಿ ಒಬ್ಬ ಗ್ರಾ.ಪಂ. ಅಧ್ಯಕ್ಷನನ್ನು ಬದಲಾಯಿಸಬೇಕಾದರೇ ಸಾಕಷ್ಟು ಗದ್ದಲ ಗಲಾಟೆಗಳಾಗತ್ತವೆ. ಆದರೆ 2 ವರ್ಷಗಳ ಪರ್ಯಾಯ ಅಧಿಕಾರವನ್ನು ಮುಗಿಸಿದ ಶ್ರೀಗಳು ಯಾವುದೇ ಗದ್ದಲ, ಸಂಘರ್ಷ ಇಲ್ಲದೇ ಮಧ್ಯರಾತ್ರಿಯಲ್ಲಿ ಕೃಷ್ಣಮಠದ ಕೀಲಿಕೈಯನ್ನು ಇನ್ನೊಬ್ಬ ಮಠಾಧೀಶರಿಗೆ ಒಪ್ಪಿಸಿ ದುಃಖ ಇಲ್ಲದೆ ತೆರಳುತ್ತಾರೆ. ಆದ್ದರಿಂದ ಉಡುಪಿಯ ಪರ್ಯಾಯೋತ್ಸವ ಎಂದರೆ ಅದು ನಿಜವಾದ ಪ್ರಜಾತಂತ್ರ ವ್ಯವಸ್ಥೆಯಾಗಿದೆ ಎಂದವರು ಹೇಳಿದರು.
ಪುತ್ತಿಗೆ ಶ್ರೀಗಳಿಂದ ಮಾನವೀಯತೆಯ ಸೇವೆ: ರೆ. ಇವಾನೋಪುತ್ತಿಗೆ ಶ್ರೀಗಳ ಆಧ್ಯಾತ್ಮಿಕ ಯೋಚನೆಗಳಿಂದ ಪ್ರಭಾವಿತಳಾಗಿದ್ದೇನೆ. ಶ್ರೀಗಳು ಕೇವಲ ಹಿಂದೂ ಧರ್ಮಕ್ಕೆ ಸೀಮಿತರಲ್ಲ, ಅವರು ಇಡೀ ಮಾನವ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಪಾನ್ ದೇಶದ ಧಾರ್ಮಿಕ ನಾಯಕಿ ರೆವೆರೆಂಡ್ ಕೋಶೋ ಇವಾನೋ ಕೊಂಡಾಡಿದರು.
ಹಿಂದುತ್ವ ಮತ್ತು ತಾನು ಪ್ರತಿನಿಧಿಸುವ ಬೌದ್ಧ ಧರ್ಮಗಳೆರಡೂ ಅಣ್ಣ-ತಂಗಿ ಇದ್ದಂತೆ, ಅವೆರಡೂ ಭಾರತದಲ್ಲಿ ಬೆಳೆದು ವಿಶ್ವಕ್ಕೆ ವ್ಯಾಪಿಸಿದವು. ಹಿಂದು ಧರ್ಮ ಕೇವಲ ಹಿಂದುಗಳಿಗೆ ಮಾತ್ರವಲ್ಲ, ಅದು ಇಡೀ ಮಾನವ ಸಮುದಾಯಕ್ಕೆ ಅತ್ಯಮೂಲ್ಕ ಕೊಡುಗೆಯಾಗಿದೆ ಎಂದವರು ಹೇಳಿದರು.ಪುತ್ತಿಗೆ ಶ್ರೀಗಳು ವಿಶ್ವ ಶಾಂತಿಗೆ ನೀಡಿದ ಕೊಡುಗೆ ಮಹತ್ತರವಾದುದು, ಅವುಗಳಿಂದ ತಾವು ಪ್ರಭಾವಿತಳಾಗಿ ಪುತ್ತಿಗೆ ಪರ್ಯಾಯೋತ್ಸವದಲ್ಲಿ ಭಾಗವಹಿಸಿದ್ದೇನೆ ಎಂದರು.