ಸಾರಾಂಶ
ಮೂಡುಬಿದಿರೆ : ವಿಶಾಲ ಬಯಲುರಂಗ ಮಂದಿರದಲ್ಲಿ ಸೇರಿದ್ದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿ, ಪೋಷಕರು, ಅತಿಥಿಗಳ ಕೈಯಲ್ಲಿ ಹಾರಾಡಿದ ರಾಷ್ಟ್ರಧ್ವಜ, ತಿರಂಗದಲ್ಲಿ ರಚಿತವಾದ ‘ಇಂಡಿಯಾ’, ಆವರಣದ ಸುತ್ತಲೂ ತ್ರಿವರ್ಣ ಸ್ತಂಭಗಳು, ದೇಶಪ್ರೇಮ ಮೂಡಿಸುವ ತ್ರಿವರ್ಣ ಚಿತ್ತಾರಗಳು, ತ್ರಿವರ್ಣದ ಪುರುಲಿಯೋ ಸಿಂಹಗಳು, ಜನ ಗಣ ಮನ, ವಂದೇ ಮಾತರಂ, ಕೋಟಿ ಕಂಠೋ ಸೇ... ರಾಷ್ಟ್ರ ಹಾಗೂ ದೇಶಭಕ್ತಿ ಗೀತೆಗಳು....
ಇದು ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ 76 ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಂಡಬಂದ ಗಣರಾಜ್ಯೋತ್ಸವದ ಚಿತ್ರಣ.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ನಾವೆಲ್ಲರೂ ಸಂವಿಧಾನ ಬದ್ಧವಾಗಿ ಕರ್ತವ್ಯ ಹಾಗೂ ಹಕ್ಕುಗಳನ್ನು ಪಾಲಿಸುವ ಸಂಕಲ್ಪವನ್ನು ಮಾಡುವ ದಿನ ಇದಾಗಿದೆ. ಆಳ್ವಾಸ್ ಅಂಗಣದಲ್ಲಿ ಗಣರಾಜ್ಯೋತ್ಸವವು ಐತಿಹಾಸಿಕ ವಿರಾಟ ರಾಷ್ಟ್ರೀಯ ಹಬ್ಬವಾಗಿ ಮೂಡುಬಂದಿದೆ ಎಂದು ಶ್ಲಾಘಿಸಿದರು.
ಬೆಳಗ್ಗೆ ೮.೩೦ಕ್ಕೆ ಸರಿಯಾಗಿ ಆರಂಭವಾದ ಸಮಾರಂಭವು ಸಮಯ ಪರಿಪಾಲನೆ ಸಾಕ್ಷೀಕರಿಸಿತು. ತಿರಂಗ ಬಣ್ಣದಿಂದ 1920 ವಿದ್ಯಾರ್ಥಿಗಳು ಸುತ್ತಲೂ ಅಂಚನ್ನು ನಿರ್ಮಿಸಿದರೆ, 3188ವಿದ್ಯಾರ್ಥಿಗಳು ತಿರಂಗದಲ್ಲಿ ‘ಇಂಡಿಯಾ’ ರಚಿಸಿ ವಿವಿಧತೆಯಲ್ಲಿ ಏಕತೆಯ ಸಂದೇಶ ರವಾನಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಭಾರತ್ ನಿರ್ಮಾಣ ಸಂಸ್ಥೆಯ ಮುಸ್ತಾಫ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಮತ್ತು ಡಾ. ವಿನಯ್ ಅಳ್ವ, ಎನ್‌ಸಿಸಿ 19 ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ಮುಕುಂದನ್, 18 ಕರ್ನಾಟಕ ಬೆಟಾಲಿಯನ್ ಆಡಳಿತಾಧಿಕಾರಿ ಲೆ. ಕರ್ನಲ್ ರೋಹಿತ್ ರೈ, 300 ಕ್ಕೂ ಅಧಿಕ ನಿವೃತ್ತ ಹಾಗೂ ಹಾಲಿ ಸೈನಿಕರು, 1395 ಕಬ್ಸ್- ಬುಲ್ ಬುಲ್, ಸ್ಕೌಟ್ಸ್ -ಗೈಡ್ಸ್ , ರೋವರ್ಸ್- ರೇಂಜರ್ಸ್ ೭೫೩ ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಇದ್ದರು.ರಾಹುಲ್ ಆರ್. ನೇತೃತ್ವದಲ್ಲಿ ಎನ್‌ಸಿಸಿ ಕೆಡೆಟ್ ಗಳು ಗೌರವ ರಕ್ಷೆ ಸಲ್ಲಿಸಿದರು. ವಂದೇ ಮಾತರಂ, ಜನಗಣಮನ ಹಾಗೂ ಕೋಟಿ ಕಂಠೋಸೇ ಗಾಯನ, ಬ್ಯಾಂಡ್ ನಿನಾದವು ಭಾವೈಕ್ಯತೆ ಮೂಡಿಸಿತು. ಸಿಡಿಮದ್ದಿನ ಪ್ರದರ್ಶನವು ಆಕಾಶದಲ್ಲಿ ತಿರಂಗ ಬಣ್ಣಗಳ ಚಿತ್ತಾರ ಮೂಡಿಸಿತು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಡೀನ್ ಕೆ. ವೇಣುಗೋಪಾಲ ಶೆಟ್ಟಿ, ಇಂಗ್ಲಿಷ್ ಉಪನ್ಯಾಸಕ ರಾಜೇಶ್ ಡಿಸೋಜ ನಿರೂಪಿಸಿದರು.