ಸಾರಾಂಶ
ಶಿವಮೊಗ್ಗ: ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳ ಪಾತ್ರ ಪ್ರಮುಖವಾಗಿದ್ದು, ನೂತನವಾಗಿ ಆರಂಭವಾಗುತ್ತಿರುವ ಕಿಸಾನ್ ಸಮೃದ್ಧಿ ಬ್ರಾಂಡಿಂಗ್ ಒಂದು ಮೈಲಿಗಲ್ಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರಗಳ ಅಟಾರಿ ವಲಯ 11ರ ನಿರ್ದೇಶಕ ವಿ.ವೆಂಕಟ ಸುಬ್ರಮಣಿಯನ್ ತಿಳಿಸಿದರು.
ನಗರದ ನವಿಲೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವೈವಿಧ್ಯಮಯ ಹಣ್ಣುಗಳು ಮತ್ತು ಆಹಾರ ಮೇಳದಲ್ಲಿ ರಜತ ಸಂಭ್ರಮ ಸ್ಮರಣಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಕೃಷಿ, ಹಣ್ಣು ಮೇಳಗಳ ಆಯೋಜನೆಯು ಕೃಷಿಕ್ಷೇತ್ರ ಸಬಲೀಕರಣಗೊಳಿಸುವಲ್ಲಿ ಉತ್ತಮ ಕಾರ್ಯವಾಗಿದ್ದು, ಇದನ್ನು ಉತ್ತೇಜಿಸುತ್ತಿರುವ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಅಭಿನಂದನೆಗಳು. ಕೃಷಿ ಕ್ಷೇತ್ರದಲ್ಲಿನ ಕ್ರಾಂತಿಕಾರಿಕ ಅಭಿವೃದ್ಧಿಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಅತ್ಯುತ್ತಮ ಕೆಲಸ ಮಾಡುತ್ತಿವೆ ಎಂದರು.
ಕಿಸಾನ್ ಸಮೃದ್ಧಿ ಯೋಜನೆಯಿಂದ ರೈತರಿಗೆ ಅನೇಕ ಲಾಭಗಳು ದೊರೆಯುತ್ತಿದ್ದು, ದೇಶದಾದ್ಯಂತ ರೈತರ ಉತ್ಪನ್ನಗಳಿಗೆ ಬ್ರಾಂಡಿಂಗ್ ಲಭಿಸುತ್ತಿದೆ. ಆನ್‌ಲೈನ್ ಮಾರುಕಟ್ಟೆಗೂ ಉತ್ತೇಜನ ದೊರೆಯುತ್ತಿದೆ. ಸ್ವಾತಂತ್ರ್ಯದ ವೇಳೆ ದೇಶ ಆಹಾರ ಕೊರತೆಯಲ್ಲಿತ್ತು, ಇದೀಗ ಆಹಾರ ಉತ್ಪನ್ನಗಳಲ್ಲಿ ಸಮೃದ್ಧಿ ಸಾಧಿಸಿದ್ದು , ಆಹಾರ ಉತ್ಪನ್ನಗಳ ರಫ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಕೃಷಿ ಸಮೃದ್ಧಿ ಆಗುತ್ತಿದೆ. ರೈತರು ಆಹಾರ, ಪೋಷಕಾಂಶಗಳ ಭದ್ರತೆ ನೀಡುತ್ತಿದ್ದಾರೆ. ವಿಶ್ವಕ್ಕೇ ಆಹಾರ ನೀಡುತ್ತಿರುವ ನಾವು ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದ್ದೇವೆ ಎಂದು ಹೇಳಿದರು.ತರೀಕೆರೆ ಶಾಸಕ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ 2 ಲಕ್ಷ ಜನರಿಗೆ ನೇರ ತರಬೇತಿ ನೀಡುತ್ತಿದ್ದು, ಪರೋಕ್ಷವಾಗಿ 35 ಲಕ್ಷ ಜನರಿಗೆ ಸಹಕಾರಿಯಾಗಿದೆ. ಬೀಜ ಉತ್ಪಾದನೆ, ತಾಂತ್ರಿಕತೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ರೈತರಿಗೆ ಬಹು ಉಪಯೋಗವಾಗುವ ಕೆಲಸ ಕೆವಿಕೆ ಮಾಡುತ್ತಿದೆ. ಚಿಕ್ಕಮಗಳೂರು ಕೆವಿಕೆ ಸಂಸ್ಥೆಗಳಲ್ಲಿ ಸಹ ಉತ್ತಮ ಕೆಲಸ ಆಗುತ್ತದೆ. ಕೃಷಿ ವಿದ್ಯಾರ್ಥಿಗಳು 3 ತಿಂಗಳು ರೈತರೊಂದಿಗೆ ಬೆರೆತು ಮಾಹಿತಿ ನೀಡುತ್ತಾ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜೇನು, ಮೀನುಗಾರಿಕೆ ಹೀಗೆ ಸಮಗ್ರ ಕೃಷಿ ಮೂಲಕ ರೈತರಿಗೆ ಸಹಕಾರಿಯಾದ ಕೆವಿಕೆ ಅಭಿವೃದ್ಧಿ ಆಗಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿದರು. ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ ಅಧ್ಯಕ್ಷತೆ ವಹಿಸಿದ್ದರು.ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಕೃಷಿ ಸಮಾಜದ ಅಧ್ಯಕ್ಷ ಎಚ್.ಎನ್.ನಾಗರಾಜ್, ಡಾ.ಪಿ.ಕೆ.ಬಸವರಾಜ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್, ರಾಯಚೂರು ವಿಶ್ವವಿದ್ಯಾಲಯದ ಡಾ.ಎನ್ ಹನುಮಂತಪ್ಪ, ವಿಶ್ರಾಂತ ಕುಲಪತಿ ಡಾ.ಪಿ.ನಾರಾಯಣಸ್ವಾಮಿ, ಡಾ.ದಿನಕರ್, ಡಾ.ರವಿ ಭಟ್ ಮತ್ತಿತರರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾಧಿಕಾರಿ ಡಾ.ಜಿ.ಕೆ.ಗಿರಿಜೇಶ್ ಸ್ವಾಗತಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))