ಸಾರಾಂಶ
ಗದಗ: ಭಾರತ ಹಾಗೂ ಪಾಕಿಸ್ತಾನ ನಡುವೆ ಮತ್ತೆ ತೀವ್ರತೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಮಾಕ್ ಡ್ರಿಲ್ ನಡೆಸುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಯುದ್ಧಕ್ಕೆ ಸನ್ನದ್ಧರಾಗಿದ್ದೇವೆ. ಭಾರತದ ಮೇಲೆ ಕಣ್ಣೆತ್ತಿ ನೋಡುವಂತಿಲ್ಲ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯ ಸಂದೇಶ ಈಗಾಗಲೇ ಕೊಟ್ಟಿದ್ದೇವೆ, ಎಂದರು.ಬಾಂಗ್ಲಾದೇಶ ಪ್ರತ್ಯೇಕಗೊಂಡಾಗ ಹಾಗೂ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಉಂಟಾದ ವಾತಾವರಣ ಈಗಲೂ ಕಂಡುಬರುತ್ತಿದೆ ಎಂದರು. “ಯುದ್ಧ ಆರಂಭವಾಗಲಿ ಅಥವಾ ಆಗದಿರಲಿ 140 ಕೋಟಿ ಭಾರತೀಯರು ದೇಶದ ಪರವಾಗಿ ಒಂದು ಧ್ವನಿಯಾಗಿ ನಿಲ್ಲಬೇಕು, ನಿಲ್ಲತ್ತೇವೆ " ಎಂದರು.ಸರ್ಕಾರಕ್ಕೆ 2 ವರ್ಷ: ರಾಜ್ಯ ಸರ್ಕಾರ 2 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮೇ 20ರಿಂದ ಒಂದು ವಾರದವರೆಗೆ ವಿವಿಧ ತಾಲೂಕುಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಈ ಮೂಲಕ ಸರ್ಕಾರದ ಸಾಧನೆ ಮತ್ತು ಯೋಜನೆಗಳ ವಿವರವನ್ನು ಜನರ ಮುಂದಿಡಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಅವರು ತಿಳಿಸಿದರು.ಮಹದಾಯಿ ವಿವಾದ: ಜೋಶಿಯ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿದ ಅವರು, ಮಹದಾಯಿ ನೀರಿನ ವಿಷಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲೋಪ ಮುಚ್ಚಲು ಪ್ರಸ್ತಾಪಿಸಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯ ಆರೋಪಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಎಚ್.ಕೆ. ಪಾಟೀಲ, "ಜೋಶಿಯವರಿಗೆ ಮಹದಾಯಿ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ, " ಎಂದು ಕಿಡಿಕಾರಿದರು. "ಅರಣ್ಯ ಹಾಗೂ ಪರಿಸರ ಅನುಮತಿಗಳ ವಿಚಾರವಾಗಿ ಸಭೆಗಳನ್ನು ಮುಂದೂಡಲಾಗಿದೆ. ಮೂರು ತಿಂಗಳುಗಳಿಂದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬ್ರಿಜೇಶ್ ಕುಮಾರ್ ವರದಿಯನ್ನು ಗೆಜೆಟ್ ನೋಟಿಫೈ ಮಾಡಿಲ್ಲ. ಕೃಷ್ಣಾ ಜಲಭಾಗಿದಾರಿಕೆ ವಿಚಾರದಲ್ಲಿಯೂ 15 ವರ್ಷಗಳಿಂದ ನಿರ್ಲಕ್ಷ್ಯವಾಗಿದೆ " ಎಂದು ಪಾಟೀಲ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ವಚನ ಭ್ರಷ್ಟತೆ, ನ್ಯಾಯವಿಲ್ಲದ ನಿರ್ಧಾರಗಳಿಗೆ ಕೇಂದ್ರ ಬೆಲೆ ಕಟ್ಟಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.