ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕಾಶ್ಮೀರದ ಪಹಲ್ಗಾಂನಲ್ಲಿ ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಪಾಕಿಸ್ತಾನದ ಉಗ್ರಗಾಮಿಗಳ ಬಂಕರ್‌ಗಳ ಮೇಲೆ ದಾಳಿ ನಡೆಸಿದ "ಸಿಂದೂರ " ಕಾರ್ಯಾಚರಣೆಯನ್ನು ಸ್ವಾಗತಿಸಿ ಬಿಜೆಪಿ ಕೆಲ ಕಾರ್ಯಕರ್ತರು ನಗರದಲ್ಲಿ ಬುಧವಾರ ಸಂಭ್ರಮಾಚರಣೆ ಮಾಡಿದರು.ನಗರದ ಶಂಕರಮಠ ರಸ್ತೆಯಲ್ಲಿ ಸಂಭ್ರಮಾಚರಣೆ ಮಾಡಿ ಪಟಾಕಿ ಸಿಡಿಸಲಾಯಿತು. ನಂತರ ಮಾತನಾಡಿದ ಬಿಜೆಪಿ ಕಾರ್ಯಕರ್ತರು, ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕರ ದಾಳಿಗೆ ಭಾರತ ತಕ್ಕ ಉತ್ತರವನ್ನೇ ಕೊಟ್ಟಿದೆ. ಈ ಹಿಂದಿನಿಂದಲೂ ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುತ್ತಲೇ ಬಂದಿದೆ. ಪಾಕಿಸ್ತಾನ ತನ್ನ ಈ ತಪ್ಪನ್ನು ತಿದ್ದಿಕೊಳ್ಳುವಂತೆ ಭಾರತ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳು ಸಲಹೆ ಹಾಗೂ ಎಚ್ಚರಿಕೆಯನ್ನೂ ನೀಡಿದ್ದವು. ಆದರೂ ಪಾಕಿಸ್ತಾನ ತನ್ನ ಚಾಳಿಯನ್ನು ಬಿಡಲಿಲ್ಲ. ಭಾರತದಾದ್ಯಂತ ಭಯೋತ್ಪಾದನೆ ಹುಟ್ಟುಹಾಕುತ್ತಿತ್ತು. ಆದರೆ, ಈ ಬಾರಿ ಪಾಕ್ ಪೋಷಿತ ಭಯೋತ್ಪಾದಕರು ಹಿಂದೂಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿ ಹತ್ಯೆ ಮಾಡಿರುವುದನ್ನು ಭಾರತೀಯರು ಸಹಿಸಲು ಸಾಧ್ಯವೇ ಇಲ್ಲ. ಹಾಗಾಗಿ ಭಾರತದ ಎಲ್ಲಾ ಹಿಂದೂಗಳು ಪಾಕಿಸ್ತಾನದ ಮೇಲೆ ಯುದ್ಧ ಮಾಡಲೇಬೇಕೆಂದು ಒತ್ತಾಯ ಮಾಡಿದ್ದರು. ಆದರೆ, ಪ್ರಧಾನಿ ಮೋದಿಯವರು ಪಾಕಿಸ್ತಾನದ ನಗರಗಳ ಮೇಲೆ ದಾಳಿ ಮಾಡದೆ, ಪಾಕಿಸ್ತಾನದ ಕೆಲಭಾಗಗಳಲ್ಲಿದ್ದ ಉಗ್ರರ ಆವಾಸಸ್ಥಾನಗಳ ಮೇಲೆ ಯುದ್ಧ ವಿಮಾನಗಳ ಮೂಲಕ ದಾಳಿ ಮಾಡಲಾಗಿದೆ. ಉಗ್ರಗಾಮಿಗಳ ಮನೆ ಹಾಗೂ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ. ಅಲ್ಲೂ ಕೂಡ ಮೋದಿಯವರು ಮಾನವೀಯತೆಯನ್ನು ಗಮನದಲ್ಲಿಟ್ಟುಕೊಂಡು ದಾಳಿ ನಡೆಸಿದ್ದಾರೆ. ಇದು ಅವರ ಉದಾರತೆ ಹಾಗೂ ಮಾನವೀಯತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಭಾರತದ ಪ್ರತೀಕಾರಕ್ಕೆ ಸ್ವರೂಪ್ ಸ್ವಾಗತ:ಭಾರತದ ಮುಕುಟಮಣಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಹಿಂದೂಗಳನ್ನು ಬಲಿ ಪಡೆದ ಉಗ್ರರ ಅಡಗುದಾಣಗಳ ಮೇಲೆ ನಮ್ಮ ದೇಶದ ಹೆಮ್ಮೆಯ ಸೈನಿಕರು ನಡೆಸಿರುವ ಆಪರೇಷನ್ ಸಿಂಧೂರ ಹೆಸರಿನ ಪ್ರತೀಕಾರದ ದಾಳಿಯನ್ನು ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಸ್ವಾಗತಿಸಿದ್ದಾರೆ.
ಉಗ್ರರನ್ನು ಪೋಷಿಸಿ ಅಮಾಯಕರ ರಕ್ತ ಹೀರಲು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದೊಳಗ್ಗೆ ನುಗ್ಗಿ ಭಯೋತ್ಪಾದಕರನ್ನು ಸದೆಬಡಿದಿರುವ ಯೋಧರ ಧೈರ್ಯ, ಸಾಹಸಕ್ಕೆ ದೊಡ್ಡದೊಂದು ಸಲಾಂ ಹೇಳಿದ್ದಾರೆ. ಆಪರೇಷನ್ ಸಿಂದೂರ್ ಇದು ಕೇವಲ ಒಂದು ದಾಳಿಯಲ್ಲ, ಇದು ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂದೂರ. ನಮ್ಮ ದೇಶದ 26 ಮಹಿಳೆಯರ ಕುಂಕುಮ ಅಳಿಸಿದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಹಾಗೂ ಕೇಂದ್ರ ಸರ್ಕಾರ ಸರಿಯಾಗಿಯೇ ಮರ್ಮಾಘಾತ ಕೊಟ್ಟಿದೆ. ಈ ಮೂಲಕ ನಿದ್ರೆಯಲ್ಲೂ ಪಾಪಿ ಪಾಕಿಸ್ತಾನ ನಡುಗುವಂತೆ ನಮ್ಮ ಯೋಧರು ಕರ್ತವ್ಯ ಮೆರೆದಿದ್ದಾರೆ. ಇದಕ್ಕಾಗಿ ನಮ್ಮ ಹೆಮ್ಮೆಯ ಯೋಧರು ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರ ನಿರ್ಭೀತ ನಾಯಕತ್ವಕ್ಕೆ ನನ್ನ ಮತ್ತು ನಮ್ಮ ಪಕ್ಷದ ನಮನಗಳು ಎಂದಿರುವ ಶಾಸಕರು, ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು, ಉಗ್ರರು ಹಾಗೂ ಉಗ್ರವಾದದ ದಮನ ವಿಷಯದಲ್ಲಿ ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಎಲ್ಲ ಕ್ರಮಗಳನ್ನು ಸ್ವಾಗತಿಸಿ, ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.ನಾನು ಕೂಡ ಅದಕ್ಕೆ ಬದ್ಧನಾಗಿದ್ದೇನೆ. ಪದೇ ಪದೆ ಭಾರತದ ಮೇಲೆ ರಕ್ತಕಾರುವ ಪಾಕಿಸ್ತಾನಕ್ಕೆ ನಮ್ಮ ಮೂರೂ ಸೇನೆಗಳ ಯೋಧರು, ತಕ್ಕಪಾಠ ಕಲಿಸಿದ್ದಾರೆ. ಇನ್ನಾದರೂ ಪಾಕಿಸ್ತಾನ ಉಗ್ರ ನಿಲುವು ಬಿಟ್ಟು ಶಾಂತಿ, ಸಹಬಾಳ್ವೆಗಾಗಿ ಶ್ರಮಿಸಲಿ, ಇಲ್ಲದಿದ್ದರೆ ನವಭಾರತ ಕೇವಲ ಎಚ್ಚರಿಸುವುದಷ್ಟೇ ಅಲ್ಲ, ಯುದ್ಧ ಸೇರಿದಂತೆ ಎಲ್ಲದಕ್ಕೂ ಸನ್ನದ್ಧವಾಗಿ ಅದು ತನ್ನ ಕರ್ತವ್ಯ ನಿರ್ವಹಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಮುಂದೆಯೂ ಯಶಸ್ಸು ಸಿಗಲಿ ಎಂದು ಶುಭಹಾರೈಸಿದ್ದಾರೆ.