ಸಾರಾಂಶ
ಕನ್ನಡಪ್ರಭ ವಾರ್ತೆ, ಭದ್ರಾವತಿ
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೇ ಪರಿಚಯವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.ದೇವಾಲಯ ಸಂವರ್ಧನಾ ಸಮಿತಿ- ಕರ್ನಾಟಕ ಹಾಗೂ ಬೆಂಗಳೂರಿನ ಸುಧರ್ಮ ಜಾಗೃತಿ ಟ್ರಸ್ಟ್ ವತಿಯಿಂದ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಲಾಗಿದ್ದ 16 ದಿನಗಳ ಧಾರ್ಮಿಕ ಶಿಬಿರದ ಸಮಾರೋಪ ಮತ್ತು ದೀಕ್ಷಾಂತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದೇಶಿಗರು ಶ್ರೀಮಂತರಾಗಿದ್ದರೂ ಶಿವರಾತ್ರಿಯಂದು ಭಾರತಕ್ಕೆ ಆಗಮಿಸಿ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಅನುಸರಿಸುತ್ತಾರೆ. ಇದು ನಮ್ಮ ಸಂಸ್ಕೃತಿಗೆ ಇರುವ ಹಿರಿಮೆ. ಮಹಿಳೆಯರು ಮಕ್ಕಳನ್ನು ದೇವಾಲಯಗಳಿಗೆ ಕರೆತರುವ ಮೂಲಕ ಯುವಜನತೆಯಲ್ಲಿಯೂ ಧಾರ್ಮಿಕ ಭಾವನೆಗಳನ್ನು ಬೆಳೆಸಬೆಕು. ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆದಷ್ಟು ಮಕ್ಕಳು ಸಂಸ್ಕಾರವಂತರಾಗಲು ಸಾಧ್ಯ. ದೇಶಭಕ್ತಿ ಬೆಳೆಸುವಲ್ಲಿಯೂ ದೇವಾಲಯಗಳ ಪಾತ್ರ ಬಹಳಷ್ಟಿದೆ. ರಾಜ್ಯದ 2.5 ಲಕ್ಷ ಅರ್ಚಕರಲ್ಲಿ ಕೆಲವರು ಪಾಂಡಿತ್ಯಗಳಿಸಿದ್ದು, ಉಳಿದವರು ಸಹ ತರಬೇತಿ ಪಡೆಯುವುದು ಮುಖ್ಯ ಎಂದರು.ಚಿತ್ರದುರ್ಗ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ, ಬಸವಣ್ಣ ಅವರು ದೇವರು ಮತ್ತು ದೇವಾಲಯಗಳನ್ನು ವಿರೋಧಿಸುತ್ತಿದ್ದರು ಎಂಬ ಕೆಲವರ ಹೇಳಿಕೆ ತಪ್ಪುಕಲ್ಪನೆ. ಬಸವಣ್ಣ ವಿರೋಧಿಸಿದ್ದು ಅರ್ಚಕರ ಕೆಲವು ತಪ್ಪುಗಳನ್ನು ಹೊರತು, ದೇವರು ಮತ್ತು ದೇವಾಲಯಗಳನ್ನಲ್ಲ ಎಂದರು.
ಸಂಸ್ಕಾರವಂತರನ್ನು ಗೌರವಿಸುವ ದೇಶ ಭಾರತ. ಪಶುಪಕ್ಷಿಗಳು ಪ್ರತಿದಿನ ತಮ್ಮ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಮಾಡುವ ಮೂಲಕ ಸಂಸ್ಕಾರ ಹೊಂದಿವೆ. ಆದ್ದರಿಂದ ಮನುಷ್ಯರಾದ ನಾವುಗಳು ಜೀವನದಲ್ಲಿ ಸಂಸ್ಕಾರ, ಶಿಸ್ತು, ಧಾರ್ಮಿಕತೆಯನ್ನು ಅಳವಡಿಸಿಕೊಂಡು ಉನ್ನತ ರೀತಿ ಬದುಕಬೇಕೆಂದು ಕರೆ ನೀಡಿದರು.ವೇದಿಕೆಯಲ್ಲಿ ಪಾಂಡುರಂಗ ಸಾಧಾಕಾಶ್ರಮದ ಮುಕ್ತಾನಂದ ಮಾಯಿ (ಮಾತಾಜಿ), ಶಿರಾಳಕೊಪ್ಪದ ಬಾಲಚಂದ್ರ ಶಾಸ್ತ್ರಿಗಳು, ಶಿಬಿರದ ಪ್ರಮುಖ್ ಜಯರಾಮ್ ಗೊಂದಿ, ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ್ ಮನೋಹರ ಮಠದ್ ಮತ್ತಿತರರಿದ್ದರು. ತರಬೇತಿ ಪಡೆದ ಅರ್ಚಕರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
- - -ಕೋಟ್ ಭಾರತದಲ್ಲಿ ಮತಾಂತರಕ್ಕೆ ಜಾತಿ ತಾರತಮ್ಯವೇ ಕಾರಣ. ಅರ್ಚಕರು ಪ್ರಯತ್ನಸಿದರೆ ಮತಾಂತರ ತಡೆಯಬಹುದು. ಮತಾಂತರ ತಡೆಯುವಲ್ಲಿ ಅರ್ಚಕರ ಪಾತ್ರ ಬಹುಮುಖ್ಯವಾಗಿದೆ. ಕೆಲವು ಜನರಲ್ಲಿ ಶಿಸ್ತು ಕಲಿಸಬೇಕು, ಜಾತಿ ಹೆಸರಿನಲ್ಲಿ ದೂರವಿರಿಸಬಾರದು. ಇಂತಹ ಘಟನೆಗಳಿಂದಲೇ ಮತಾಂತರಗಳು ನಡೆಯುವುದು
- ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ- - --ಡಿ4ಬಿಡಿವಿಟಿ3:
ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭ, ದೀಕ್ಷಾಂತ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಇನ್ನಿತರರು ಪಾಲ್ಗೊಂಡರು.