ಭಾರತದ ಅಧ್ಯಾತ್ಮ, ಧಾರ್ಮಿಕ ಪರಂಪರೆ ವಿಶ್ಚದಲ್ಲಿ ಶ್ರೇಷ್ಠ

| Published : Aug 18 2025, 12:01 AM IST

ಸಾರಾಂಶ

ಇಡೀ ವಿಶ್ಚದಲ್ಲಿ ಭಾರತದ ಅಧ್ಯಾತ್ಮ ಮತ್ತು ಧಾರ್ಮಿಕ ಪರಂಪರೆ ಶ್ರೇಷ್ಠವಾಗಿದೆ ಎಂದು ಜತ್ತ ಮತಕ್ಷೇತ್ರದ ಶಾಸಕ ಗೋಪಿಚಂದ ಪಡೋಲಕರ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ/ಅಥಣಿ

ಇಡೀ ವಿಶ್ಚದಲ್ಲಿ ಭಾರತದ ಅಧ್ಯಾತ್ಮ ಮತ್ತು ಧಾರ್ಮಿಕ ಪರಂಪರೆ ಶ್ರೇಷ್ಠವಾಗಿದೆ ಎಂದು ಜತ್ತ ಮತಕ್ಷೇತ್ರದ ಶಾಸಕ ಗೋಪಿಚಂದ ಪಡೋಲಕರ ಹೇಳಿದರು.

ಹೊಳೆ ಹುಚ್ಚೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಜಿ ಶಮಶುದ್ದಿನ್‌ ನಬಿಸಾಬ್‌ ಕಿರಣಗಿ ವಿತರಿಸಿದ 101 ಭಗವದ್ಗೀತೆ ಗ್ರಂಥ ವಿತರಣಾ ಕ್ರಾರ್ಯಕ್ರಮದಲ್ಲಿ ಭಗವದ್ಗೀತೆ ಸ್ವೀಕರಿಸಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳು ನಮ್ಮನ್ನು ಒಂದು ಗೂಡಿಸುತ್ತವೆ. ಶ್ರೀಮಠದ ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ ₹25 ಲಕ್ಷ ಅನುದಾನ ಕೊಡುತ್ತೇನೆ ಎಂದು ಭರವಸೆ ನೀಡಿದರು.ಹಾಜಿ ಶಮಶುದ್ದಿನ್‌ ಕಿರಣಗಿ 101 ಭಗವತ್ ಗೀತೆ ಗ್ರಂಥಗಳನ್ನು ವಿತರಿಸುವುದರ ಜೊತೆಗೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿರುವುದು ಕೂಡ ನಮಗೆಲ್ಲರಿಗೂ ಮಾದರಿ ಮತ್ತು ಅವರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದಾಗಿದೆ ಎಂದು ಶ್ಲಾಘಿಸಿದರು.ಸಾಹಿತಿ ಡಾ.ವಿ.ಎಸ್.ಮಾಳಿ ಮಾತನಾಡಿ, ಭಗವದ್ಗೀತೆ ಒಂದು ಧರ್ಮದ ಗ್ರಂಥ ಅಲ್ಲ ,ಅದು ಜಗತ್ತಿನ ತತ್ವಜ್ಞಾನದ ಶ್ರೇಷ್ಠ ಕೋಶ. ಭಗವದ್ಗೀತೆ, ಉಪನಿಷತ್‌ ತತ್ವಗಳನ್ನು ಒಳಗೊಂಡ ಗ್ರಂಥವೇ ಭಗವದ್ಗೀತೆ ಇಂತಹ ಭಗವದ್ಗೀತೆಯ 100 ಗ್ರಂಥಗಳನ್ನು ಭಕ್ತರಿಗೆ ಹಂಚಿರುವುದು ಹಾಜಿ ಶಮಶುದ್ದಿನ್‌ ಕಿರಣಗಿಯವರ ಕಾರ್ಯ ನಮಗೆಲ್ಲ ಅನುಕರಣೀಯ ಎಂದರು. ಗುಗವಾಡ ಗ್ರಾಮ ಮಹಾರಾಷ್ಟ್ರದಲ್ಲಿದ್ದರೂ ಕೂಡ ಕನ್ನಡ ಭಾಷೆಯನ್ನೇ ಪ್ರಾಧಾನ್ಯತೆ ಮಾಡಿಕೊಂಡ ಗುಗವಾಡ ಗ್ರಾಮಸ್ಥರು ಹೊಳೆ ಹುಚ್ಚೇಶ್ವರ ಮಠದಲ್ಲಿ ನಿರಂತರವಾಗಿ ತಿಂಗಳು ಶ್ರಾವಣ ಮಾಸದ ಅಂಗವಾಗಿ ಪ್ರವಚನದ ನೆಪದಲ್ಲಿ ಸೇರುವ ಮೂಲಕ 12ನೇ ಶತಮಾನದ ಅನುಭವ ಮಂಟಪದ ನಿರ್ಮಾಣ ಮಾಡಿದ್ದಾರೆ ಎಂದರು.

ಹೊಳೆ ಹುಚ್ಚೇಶ್ವರ ಮಠದ 13ನೇ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಾತಿ ಜಾತಿ, ಧರ್ಮ, ಧರ್ಮಗಳ ಮಧ್ಯೆ ಹೊಡೆದಾಡುತ್ತಿರುವ ಇಂದಿನ ವಿಷಮ ಸ್ಥಿತಿಯಲ್ಲಿ ಗೂಗವಾಡದಂತಹ ಸಣ್ಣ ಗ್ರಾಮದಲ್ಲಿ ಹಿಂದೂ-ಮುಸ್ಲಿಂರು ಒಂದಾಗಿ ಭಾವೈಕ್ಯರಾಗಿರುವುದು ಇಡೀ ದೇಶಕ್ಕೆ ಮಾದರಿ ಎಂದು ನುಡಿದರು.ಈ ಸಂದರ್ಭದಲ್ಲಿ ರಾಯಗೊಂಡ ಅಂದಾನಿ, ಗಂಗಪ್ಪ ಕೊಂಕಣಿ, ಗುರುಶಾಂತ ಹಿರೇಮಠ, ಮಲ್ಲಪ್ಪ ಅಂದಾನಿ, ಮಹಾದೇವ ಜತ್ತಿ, ರಾಜು ಅಂದಾನಿ, ಸಿದ್ಧಪ್ಪ ಮದಭಾವಿ, ಬಸಗೊಂಡ ಚೌಗಲೆ, ರಾಮಗೊಂಡ ಸಮಗೊಂಡನವರ, ಚನ್ನಪ್ಪ ನಂದೇಶ್ವರ, ಸೋಹೇಲ್ ಕಿರಣಗಿ, ಯುಸೂಫ ಕಿರಣಗಿ, ಇಕ್ಬಾಲ್ ಕಿರಣಗಿ, ಫಾರೂಕ್ ಕಿರಣಗಿ, ಕಿರಣ ಗೆಜ್ಜಿ, ಅವಿನಾಶ ಪಾಟೀಲ, ರಸೂಲಸಾಬ್‌ ನದಾಫ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.ಮುಸ್ಲಿಂ ವ್ಯಕ್ತಿಯಿಂದ ಭಗವದ್ಗೀತೆ ವಿತರಣೆ

ಮುಸ್ಲಿಂ ಧರ್ಮದವರಾದರೂ ಕೂಡ ಗುಗವಾಡ ಗ್ರಾಮದ ಹಾಜಿ ಶಮಶುದ್ದಿನ್‌ ನಬಿಸಾಬ್‌ ಕಿರಣಗಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯ ಪ್ರತಿಗಳನ್ನು 101 ಭಕ್ತರಿಗೆ ಗುಗವಾಡ ಗ್ರಾಮದ ಹೊಳೆ ಹುಚ್ಚೇಶ್ವರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿತರಿಸುವ ಮೂಲಕ ಸಾಮರಸ್ಯದ ಭಾವೈಕ್ಯತೆ ಭಾವ ಬಿತ್ತಿ ಎಲ್ಲರಿಗೂ ಮಾದರಿಯಾದರು.