ಸಾರಾಂಶ
ನರಸಿಂಹರಾಜಪುರ, ಭಾರತ ದೇಶದಲ್ಲಿ ಮಹಿಳೆಯರು, ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಾಡುತ್ತಿದೆ ಎಂದು ಕಿರಿಯ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಪೌಷ್ಟಿಕಾಂಶ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಭಾರತ ದೇಶದಲ್ಲಿ ಮಹಿಳೆಯರು, ಬಾಣಂತಿಯರು, ಗರ್ಭಿಣಿಯರು ಹಾಗೂ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿ ಕಾಡುತ್ತಿದೆ ಎಂದು ಕಿರಿಯ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ತಿಳಿಸಿದರು.
ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಇನ್ನರ್ ವೀಲ್ ಸಂಸ್ಥೆ ಹಾಗೂ ಪುಷ್ಪ ನರ್ಸಿಂಗ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ವಿಶ್ವ ಪೌಷ್ಟಿಕಾಂಶ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಪೌಷ್ಟಿಕತೆ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಕೂಡ ಅಪೌಷ್ಟಿಕತೆ ತಡೆಯುವಲ್ಲಿ ಹಿನ್ನೆಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಸೇವಿಸಬೇಕು. ಸ್ಥಳೀಯವಾಗಿ ಸಿಗುವ ಆಹಾರ ಪದಾರ್ಥಗಳನ್ನು ಸೇವಿಸಿ ಉತ್ತಮ ಆರೋಗ್ಯ ಪಡೆದುಕೊಳ್ಳೋಣ. ಆರೋಗ್ಯ ಇಲಾಖೆ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಲ್ಲಾ ಸಿಬ್ಬಂದಿ ಮನೆ, ಮನೆಗೆ ಪೌಷ್ಟಿಕ ಆಹಾರದ ಅಗತ್ಯತೆ, ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಬೇಕು. ತಾಲೂಕು ಕಾನೂನು ಸೇವಾ ಸಮಿತಿ ಸೌಲಭ್ಯವನ್ನು ಎಲ್ಲರೂ ಉಪಯೋಗಿಸಿಕೊಂಡು ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ಸೆಪ್ಟೆಂಬರ್ ತಿಂಗಳನ್ನು ಅಪೌಷ್ಟಿಕ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಿ ಶಿಶು ಮರಣ ಕಡಿಮೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಸ್ಥಳೀಯವಾಗಿ ದೊರಕುವ ಪೌಷ್ಟಿಕ ಆಹಾರ ಪದಾರ್ಥಗಳಿಂದ ಸಾರ್ವಜನಿಕರ ಆರೋಗ್ಯ ಹೆಚ್ಚಿಸಬೇಕಾಗಿದೆ. ಗರ್ಭಿಣಿಯರು, ಬಾಣಂತಿ ಯರು, ಮಹಿಳೆಯರ, ಹದಿಹರೆಯದವರ ರಕ್ತಹೀನತೆ ಪರೀಕ್ಷಿಸಿ ಚಿಕಿತ್ಸೆ ನೀಡುವ ಮುಖ್ಯ ಗುರಿಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಆಹಾರದಲ್ಲಿರುವ ಪೋಷಕಾಂಶಗಳಾದ ಕಾರ್ಬೋಹೈಡ್ರೇಟ್ ಪ್ರೋಟೀನ್, ವಿಟಮಿನ್, ಮಿನರಲ್ ಕೊಬ್ಬು ನಾರು ಮತ್ತು ನೀರಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕೆಂದರು. ಸಭೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಗದಿಗಪ್ಪನೇಕಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಬಿಂದುವಿಜಯ್, ಅರವಳಿಕೆ ತಜ್ಞ ಡಾ.ವೀರಪ್ರಸಾದ್, ಪ್ರಸೂತಿ ತಜ್ಞೆ ಡಾ.ಚಂದ್ರಪ್ರಭಾ, ನೇತ್ರ ತಜ್ಞೆ ಡಾ.ಶ್ರೀರಂಜಿನಿ, ನೀತಾ ಪ್ರದೀಪ್, ಅಕ್ಷತಾರಜತ್, ಪಿ.ಪಿ.ಬೇಬಿ, ಸಿಸ್ಟರ್ ನೋಯಲ್ ಪೂರ್ಣಾವತಿ, ನಾಗಲತಾ, ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.