ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಬುದ್ಧ ತನ್ನ ಸತ್ಯವನ್ನು ಜಗತ್ತಿಗೆ ಸಾರಿದ. ಆದರೆ, ಇದೇ ಅಂತಿಮ ಎಂದು ಹೇಳಲಿಲ್ಲ. ಹಲವಾರು ಮತ, ಪಂಥಗಳು ಭಾರತದಲ್ಲಿ ಹುಟ್ಟಿದವು. ಇದು ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ ಎಂದು ಏಷಿಯಾ ನೆಟ್ ಸುವರ್ಣ ನ್ಯೂಜ್ ಸಂಪಾದಕ ಅಜಿತ್ ಹನುಮಕ್ಕನವರ ಹೇಳಿದರು.ಭಾನುವಾರ ಕಲ್ಲಹಳ್ಳಿಯ ಸತ್ಯಕಾಮ ಪ್ರತಿಷ್ಠಾನದ ವತಿಯಿಂದ ಸುಮ್ಮನೆಯಲ್ಲಿ ಸಾಹಿತಿ ಸತ್ಯಕಾಮರ ಜನ್ಮಾರಾಧನೆ ಪ್ರಯುಕ್ತ ಏರ್ಪಡಿಸಿದ್ದ ಬುದ್ಧ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭೂಮಿ ದುಂಡಗಿದೆ ಎಂದವರನ್ನು ಕೊಲ್ಲಲಾಯಿತು. ಆದರೆ, ಭಾರತದಲ್ಲಿ ಎಲ್ಲ ಮತ-ಪಂಥ ಬೆಳೆಸಲು ಮತ್ತು ವಾದ ಮಂಡಿಸಲು ಅವಕಾಶ ವಿತ್ತು, ಎಲ್ಲಾ ಮಾರ್ಗಗಳು ದೇವರ ಸಾಕ್ಷಾತ್ಕಾರ ಮತ್ತು ಮುಕ್ತಿ ಮಾರ್ಗ ತೊರಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಕಳದ ಪತ್ರಕರ್ತ ಶ್ರೀಕಾಂತ ಶೆಟ್ಟಿ ಮಾತನಾಡಿ, ಸ್ವಾರ್ಥಿಗಳಿಂದ ಸನಾತನ ಪರಂಪರೆಯ ನಾಶಕ್ಕೆ ನಿರಂತರ ಯತ್ನ ನಡೆಯುತ್ತಿದೆ. ಭಾರತದ ಜ್ಞಾನಕ್ಕೆ ವೈದಿಕ ಪರಂಪರೆ ಮೂಲ ಧಾತುವಾಗಿದೆ. ಆಧುನಿಕ ಬೌದ್ಧರು ಎಂದು ಹೇಳಿಕೊಳ್ಳುವರು ಸನಾತನ ಸಂಸ್ಕೃತಿ ವಿರೋಧಿಸುವುದನ್ನು ರೂಢಿಸಿಕೊಂಡಿದ್ದಾರೆ. ಬುದ್ಧ ಸಾರ್ವತ್ರಿಕವಾಗಿ ಆತ್ಮೋದ್ಧಾರ ಕುರಿತು ಬೋಧಿಸಿದ, ಬುದ್ಧ ಯಾರನ್ನೂ ದ್ವೇಷಿಸಲು ಹೇಳಿಲ್ಲವಾದರೂ ನಿರಂತರವಾಗಿ ಹಿಂದು ವಿರೋಧಿ, ಹಿಂದುಗಳನ್ನು ಎತ್ತಿಕಟ್ಟುವ, ಸಮಾಜ ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದರು.ಜಗತ್ತನ್ನು ಪ್ರೀತಿಸಿ, ಯಾರನ್ನು ದ್ವೇಷಿಸಬೇಡಿ ಎಂದು ಬುದ್ಧ ಹೇಳಿದ್ದರು. ಆದರೆ, ಇಂದು ಸ್ವಾರ್ಥಕ್ಕಾಗಿ ಸಮಾಜ ಒಡೆಯುವ ಕೆಲಸವಾಗುತ್ತಿದೆ. ಸನಾತನ ಸಂಸ್ಕೃತಿಯಲ್ಲಿ ಆಸ್ತಿಕವಾದ ಎಲ್ಲವನ್ನುಸ್ವೀಕರಿಸುವ ಮನೋಭಾವ ಹೇಳಲಾಗಿದೆ. ಅಪ್ಘನ್ನರು ಬುದ್ಧನ ಪ್ರತಿಮೆಗಳನ್ನು ನಾಶಮಾಡಿದಾಗ ಚಕಾರ ಎತ್ತದ ನವಬೌದ್ಧರು, ಬೌದ್ಧ ಕೇಂದ್ರಗಳನ್ನು ನಾಶ ಮಾಡಿ ಬುದ್ಧ ಪರಸ್ಥ ಎಂದು ಕರೆದರೂ ಮಾತಾಡದವರು, ಭಾರತದ ವೈದಿಕ ಸಂಪ್ರದಾಯ ದ್ವೇಷಿಸುತ್ತಿದ್ದಾರೆ. ಭಕ್ತಿಯಾರ ಖಿಲ್ಜಿ ನಳಂದಾ ವಿಶ್ವವಿದ್ಯಾಲಯವನ್ನು ಸುಟ್ಟು ಹಾಕಿದ. ಅದರಲ್ಲಿದ್ದ ಗ್ರಂಥಗಳು ವರ್ಷಾನುಗಟ್ಟಲೆ ಸುಟ್ಟು ಹೋದವು. ಆಚಾರ್ಯರನ್ನು ಕೊಲ್ಲಲಾಯಿತು. ಆದರೂ ನಿಜವಾದ ವಿರೋಧಿಗಳು ಯಾರು ಎಂದು ತಿಳಿಯದವರ ಹಾಗೆ ನಟಿಸುತ್ತ ಹಿಂದು ಸಮಾಜವನ್ನು ಎತ್ತಿಕಟ್ಟುತ್ತಿರುವರ ವಿರುದ್ಧ ಸಮಾಜ ಜಾಗೃತವಾಗಬೇಕಿದೆ ಎಂದು ಹೇಳಿದರು.
ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಿ, ಯಶೋಧರೆಯ ತ್ಯಾಗ ಮತ್ತು ನಡೆದುಕೊಂಡ ರೀತಿಯ ಕುರಿತು ವಿವರಿಸಿದರು. ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ತಮ್ಮ ಕಾವ್ಯದಲ್ಲಿ ಯಶೋಧರೆಯ ಕುರಿತು ಪ್ರಸ್ತಾಪಿಸಿದ್ದನ್ನು ತಿಳಿಸಿಕೊಟ್ಟರು. ವೀಣಾ ಬನ್ನಂಜೆ ಮತ್ತು ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.ಬೌದ್ಧ ಮತ್ತು ಹಿಂದು ಧರ್ಮಕ್ಕೆ ಯಾವುದೇ ವ್ಯತ್ಯಾಸವಿಲ್ಲ, ಮಾರ್ಗ ಬೇರೆ ಬೇರೆಯಾಗಿದೆ. ಶ್ರೀರಾಮನ ವಂಶ, ಬುದ್ಧನ ವಂಶ ಎರಡೂ ಒಂದೇ. ಇಬ್ಬರೂ ಗೌತಮ ಗೋತ್ರದವರು, ಶೂನ್ಯವಾದ ಎಂದರೆ ಪರಮಾತ್ಮನ ಕುರಿತಾಗಿ ಹೇಳಲು ಶಬ್ಧಗಳೇ ಇಲ್ಲ ಎಂದು ಅರ್ಥ. ಉಪನಿಷತ್ತುಗಳ ಪರಿಪೂರ್ಣ ಅನಯಭವವನ್ನು ಬುದ್ಧ ಹೇಳಿದರು. ಜೈನರು, ಬೌದ್ಧರು ಎಂದಿಗೂ ಹೊಡೆದಾಡಿಕೊಳ್ಳಲಿಲ್ಲ, ಕಮ್ಯುನಿಷ್ಠರು ತತ್ವಗಳನ್ನು ತಿರುಚಿದ್ದಾರೆ ಹೊರತು, ಬುದ್ಧ ಬಂಡವಾಳ ಶಾಹಿ ವಿರೋಧಿಯಾಗಿರಲಿಲ್ಲ.
- ಶತಾವಧಾನಿ ಡಾ. ಆರ್. ಗಣೇಶ ಹಿರಿಯ ಸಾಹಿತಿ