ಜಗತ್ತಿನ 5ನೇ ಆರ್ಥಿಕ ಶಕ್ತಿ ಭಾರತ: ಪ್ರಹ್ಲಾದ ಜೋಷಿ

| Published : Nov 13 2024, 12:47 AM IST

ಸಾರಾಂಶ

ಜಗತ್ತಿನ ಉತ್ಪಾದನಾ ಕೇಂದ್ರವೆಂದು ಕೋವಿಡ್‌ ಪೂರ್ವದಲ್ಲಿ ಚೀನಾ ಕರೆಯಲ್ಪಡುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಅಂತಹ ಕೇಂದ್ರವಾಗಿ ಭಾರತ ಬದಲಾಗುತ್ತಿದೆ. ವಿಶ್ವಾದ್ಯಂತ ಭಾರತಕ್ಕೆ ಮನ್ನಣೆ ಸಿಗುತ್ತಿದೆ ಎಂದು ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಹೊಸ, ನವೀಕರಿಸಬಹುದಾದ ಶಕ್ತಿ ಮೂಲಗಳ ಇಲಾಖೆ ಸಚಿವ ಪ್ರಹ್ಲಾದ ಜೋಶಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ । ವಿಶ್ವದ ಅತ್ಯಂತ ಯುವರಾಷ್ಟ್ರ ಭಾರತ: ಕೇಂದ್ರ ಸಚಿವ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಗತ್ತಿನ ಉತ್ಪಾದನಾ ಕೇಂದ್ರವೆಂದು ಕೋವಿಡ್‌ ಪೂರ್ವದಲ್ಲಿ ಚೀನಾ ಕರೆಯಲ್ಪಡುತ್ತಿತ್ತು. ಆದರೆ, ಪ್ರಸ್ತುತ ದಿನಗಳಲ್ಲಿ ಅಂತಹ ಕೇಂದ್ರವಾಗಿ ಭಾರತ ಬದಲಾಗುತ್ತಿದೆ. ವಿಶ್ವಾದ್ಯಂತ ಭಾರತಕ್ಕೆ ಮನ್ನಣೆ ಸಿಗುತ್ತಿದೆ ಎಂದು ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಹೊಸ, ನವೀಕರಿಸಬಹುದಾದ ಶಕ್ತಿ ಮೂಲಗಳ ಇಲಾಖೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಜಿಎಂಐಟಿ ಕ್ಯಾಂಪಸ್‌ನಲ್ಲಿ ಮಂಗಳವಾರ ಭೀಮಸಮುದ್ರದ ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ ಜಿಎಂ ವಿಶ್ವವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿದ ನಂತರ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಸಂಪನ್ಮೂಲಗಳನ್ನು ನಾವು ಎಷ್ಟು ಚೆನ್ನಾಗಿ ಬೆಳೆಸುತ್ತೇವೋ, ಜಾಗತಿಕ ಮಟ್ಟದಲ್ಲೂ ಅಷ್ಟೇ ಬೆಳವಣಿಗೆ ಮತ್ತು ಅವಕಾಶಗಳನ್ನು ಕಾಣಲು ಸಾಧ್ಯ ಎಂದರು.

ಅತ್ಯಧಿಕ ವಿದೇಶಿ ವಿನಿಮಯ ಮೀಸಲು ಹಣ ಕಂಡ 4 ದೇಶಗಳಲ್ಲಿ ಭಾರತವೂ ಒಂದು. ಈ ಹಿಂದೆ ವಿದೇಶಿ ವಿನಿಮಯ ಮೀಸಲು ಕಾಣದೆ ದುರ್ಬಲ ಆರ್ಥಿಕತೆಯ ದೇಶವೆಂದು ಭಾರತ ಗುರುತಿಸಲ್ಪಡುತ್ತಿತ್ತು. ಆದರೆ, ಈಗ ಅತ್ಯಧಿಕ ವಿದೇಶಿ ವಿನಿಮಯ ಕಂಡು ಜಗತ್ತಿನ 5ನೇ ಆರ್ಥಿಕತೆಯ ಶಕ್ತಿಯಾಗಿ ಬದಲಾಗಿದೆ. ವಿಶ್ವದಲ್ಲಿ ಮಾನವ ಸಂಪನ್ಮೂಲ ಕಡಿಮೆಯಾಗಿದ್ದು, ಭಾರತ ಬೆಳವಣಿಗೆ ಕಾಣಲು ಇದೂ ಸಾಧ್ಯ ಮಾಡಿಕೊಟ್ಟಿದೆ. ಭಾರತವು ಮೂರನೇ ಪ್ರಬಲ ಆರ್ಥಿಕ ಶಕ್ತಿಯಾಗಲು ಉತ್ಪಾದನಾ ಮತ್ತು ಆರ್ಥಿಕ ಚಟುವಟಿಕೆಗಳು ನಮ್ಮ ದೇಶದಲ್ಲಿ ಪ್ರಚಂಡವಾಗಿ ಆಗಬೇಕಿದೆ ಎಂದು ಅವರು ಹೇಳಿದರು.

ಜಗತ್ತಿನ ಅತ್ಯಂತ ಯುವರಾಷ್ಟ್ರ ಭಾರತ. ನಮ್ಮ ಯುವಕರ ಶಕ್ತಿ ಮತ್ತು ಪ್ರತಿಭೆ ಗುರುತಿಸಿ, ಅಂತಹವರಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಿದಾಗ ಜಗತ್ತು ಭಾರತದ ಸೇವೆ ಮತ್ತು ಉತ್ಪನ್ನಗಳನ್ನು ಒಪ್ಪಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಾಗಿ ಜಿಎಂಐಟಿ ಈಗ ಜಿಎಂ ವಿಶ್ವವಿದ್ಯಾಲಯವಾಗಿ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ದೂರದರ್ಶಿತ್ವ ಕಾರಣ. ತಂದೆ ಇಚ್ಛೆಯಂತೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ ಮಾರ್ಗದರ್ಶನದಲ್ಲಿ ಜಿ.ಎಂ. ಪ್ರಸನ್ನಕುಮಾರ, ಜಿ.ಎಂ. ಲಿಂಗರಾಜು, ಜಿ.ಎಸ್. ಅನಿತ್ ಕುಮಾರ ಇತರರು ಸಂಸ್ಥೆ ಮುನ್ನಡೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಹ್ಲಾದ ಜೋಷಿ ತಿಳಿಸಿದರು.

ನೂತನ ವಿದ್ಯಾರ್ಥಿ ನಿಲಯ ಉದ್ಘಾಟಿಸಿದ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಪ್ರಸ್ತುತ ಉದ್ಯೋಗ ಮತ್ತು ಶಿಕ್ಷಣಕ್ಕೆ ಬಹಳ ಮಹತ್ವವಿದೆ. ಅಕ್ಷರ ಜ್ಞಾನವು ಪ್ರತಿ ಒಂದು ಕ್ಷೇತ್ರಕ್ಕೂ ಅನಿವಾರ್ಯವಾಗಿದೆ. ವಿದ್ಯೆಗೆ ಬಡವ, ಶ್ರೀಮಂತನೆಂಬ ತಾರತಮ್ಯ ಇಲ್ಲ. ಪ್ರತಿಭೆ, ಕೌಶಲ್ಯ ಶಕ್ತಿ ಬಹುಮುಖ್ಯ. ಹೀಗೆ ಅಕ್ಷರ ಜ್ಞಾನದ ಜೊತೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿ.ಮಲ್ಲಿಕಾರ್ಜುನಪ್ಪ ಸ್ಥಾಪಿಸಿದ ಸಂಸ್ಥೆಯನ್ನು ಪುತ್ರರಾದ ಜಿ.ಎಂ. ಸಿದ್ದೇಶ್ವರ, ಸಹೋದರರು, ಕುಟುಂಬ ಮುಂದೆಯೂ ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಎಂಜಿನಿಯರಿಂಗ್, ಮೆಡಿಕಲ್, ತಾಂತ್ರಿಕ ಕಾಲೇಜು ಸ್ಥಾಪನೆಯಾಗಿ ಜ್ಞಾನ ಮತ್ತು ಕೌಶಲ್ಯ ಕಂಡಾಗ ಯಾವುದೇ ಜಿಲ್ಲೆಯು ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಜಿಎಂ ವಿಶ್ವವಿದ್ಯಾನಿಲಯ ವಿಶಾಲವಾಗಿ ಬೆಳೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖೇನ ಅಕ್ಷರಜ್ಞಾನ ನೀಡುವ ಜೊತೆಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟು ಬದುಕು ಹಸನು ಮಾಡಲಿ. ಮಕ್ಕಳಿಗೆ ಮೀನು ಹಿಡಿದು ತಂದು ತಿನ್ನಿಸುವುದಲ್ಲ. ಮೀನು ಹಿಡಿಯುವುದನ್ನು ಕಲಿಸಬೇಕೆಂಬ ಮಾತಿದೆ. ಶಾಲಾ- ಕಾಲೇಜುಗಳಿಗೆ ಕಳಿಸಿದರಷ್ಟೇ ಕರ್ತವ್ಯ ಮುಗಿಯದು. ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ಉದ್ಯೋಗ ಪಡೆಯುವಂತಹ ಶಕ್ತಿ ನೀಡಬೇಕಾಗಿದೆ. ಉದ್ಯೋಗ ಪಡೆಯದಿದ್ದರೆ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಲಿದೆ. ಯಾವುದೇ ಸರಕಾರ ಉದ್ಯೋಗ ಸೃಷ್ಟಿಸುವ ಕೆಲಸವನ್ನೂ ಮಾಡಬೇಕಿದೆ. ನಮ್ಮ ದೇಶದಲ್ಲೇ ಗುಣಮಟ್ಟದ ಶಿಕ್ಷಣ ಕೊಟ್ಟಾಗ ಆ ಶಿಕ್ಷಣಕ್ಕಾಗಿ ಬೇರೆ ದೇಶಗಳಿಗೆ ನಮ್ಮ ದೇಶದಿಂದ ಹೋಗುವುದು ಕಡಿಮೆ ಆಗುವುದರ ಜೊತೆಗೆ ನಮ್ಮ ದೇಶಕ್ಕೇ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಮಾತನಾಡಿ, 2001ರಲ್ಲಿ ತಮ್ಮ ತಂದೆ ಜಿ.ಮಲ್ಲಿಕಾರ್ಜುನಪ್ಪ ಆಸೆಯಂತೆ ಸಂಸ್ಥೆ ಹುಟ್ಟಿತು. ತುಮಕೂರು ಮಾಜಿ ಸಂಸದ ಬಸವರಾಜರ ಸಹಕಾರವಿತ್ತು. ಈ ಇಬ್ಬರೂ ಕೇಂದ್ರ, ರಾಜ್ಯ ಸರ್ಕಾರಗಳ ಅನುಮತಿ ಪಡೆದು ಸಂಸ್ಥೆ ಆರಂಭಿಸಿದರು. ಆಗ ಕೇವಲ 181 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಈಗ 8 ಸಾವಿರ ವಿದ್ಯಾರ್ಥಿಗಳು ವಿದ್ಯೆ ಪಡೆಯುತ್ತಿದ್ದಾರೆ ಎಂದರು.

ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ ಈ ಮೂರು ಕೋರ್ಸ್‌ಗಳಿದ್ದ ಈ ಸಂಸ್ಥೆಯಲ್ಲಿ ಜಿಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಜಿಎಂ ಪಾಲಿಟೆಕ್ನಿಕ್ ಕಾಲೇಜ್, ಜಿಎಂ ಪಿಯು ಕಾಲೇಜ್, ಜಿಎಂಎಸ್ ಅಕಾಡೆಮಿ ಫಸ್ಟ್ ಗ್ರೇಡ್ ಕಾಲೇಜ್, ಜಿಎಂ ಫಾರ್ಮಸಿ ಕಾಲೇಜ್, ಜಿಎಂ ಯುನಿವರ್ಸಿಟಿ ಆಗಿ ಬೆಳೆದು ವಿವಿಧ ಕೋರ್ಸ್ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹರಿಹರ ಶಾಸಕ ಬಿ.ಪಿ. ಹರೀಶ್, ವಿಪ ಸದಸ್ಯರಾದ ಎನ್.ರವಿಕುಮಾರ, ಕೆ.ಎಸ್. ನವೀನ, ಬಿಜೆಪಿ ಮುಖಂಡರಾದ ಜಿ.ಎಸ್.ಗಾಯತ್ರಿ ಸಿದ್ದೇಶ್ವರ, ವಿವಿ ಕುಲಾಧಿಪತಿ ಜಿ.ಎಂ.ಲಿಂಗರಾಜು, ಟ್ರಸ್ಟಿಗಳಾದ ಜಿ.ಎಂ.ಪ್ರಸನ್ನಕುಮಾರ, ಜಿ.ಎಸ್.ಅನಿತ್ ಕುಮಾರ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ವೀರೇಶ ಹನಗವಾಡಿ, ರಾಜೀವ್, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಜಿ.ಪಿ.ಮಲ್ಲಿಕಾರ್ಜುನ, ಶೀಲಾ ಪ್ರಸನ್ನಕುಮಾರ್, ವೀಣಾ ಲಿಂಗರಾಜು, ಸವಿತಾ ಅನಿತ್ ಕುಮಾರ್, ಜಿ.ಎಲ್.ರಾಜೀವ್, ಕುಲ ಸಚಿವ ಡಾ.ಬಿ.ಎಸ್.ಸುನೀಲಕುಮಾರ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದ್ದರು.

ಅನಂತಕುಮಾರ್‌ ಪುಣ್ಯಸ್ಮರಣೆ:

ಜಿಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ.ಗಿರೀಶ್ ಬೋಳಕಟ್ಟಿ, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಕೇಂದ್ರದ ಮಾಜಿ ಸಚಿವರಾದ ದಿವಂಗತ ಅನಂತಕುಮಾರರ 6ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

- - -

ಕೋಟ್‌ ಪ್ರಸ್ತುತ ದುಡ್ಡೇ ದೊಡ್ಡಪ್ಪ ಅಲ್ಲ. ವಿದ್ಯೆ ಅದರ ಅಪ್ಪ ಆಗಿದೆ. ಹಾಗಾಗಿ ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಹಂಬಲವಿಟ್ಟು, ತಮ್ಮ ತಂದೆ ಸ್ಥಾಪಿಸಿದ ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಇಂದು ದೈತ್ಯವಾಗಿ ಬೆಳೆದಿದೆ. ಸಂಸ್ಥೆಯಲ್ಲಿ ಜ್ಞಾನದ ಜೊತೆಗೆ ಉದ್ಯೋಗವನ್ನೂ ಕಲ್ಪಿಸಿಕೊಡಲಾಗುತ್ತಿದೆ. ಇಲ್ಲಿ ಓದಿದರೆ ಉದ್ಯೋಗವು ಕಾಯಂ ಆಗಲಿದೆ ಎಂಬುದಕ್ಕೆ ಇಲ್ಲಿ ವಿದ್ಯೆ ಪಡೆದ ಮಕ್ಕಳು, ಉಜ್ವಲ ಭವಿಷ್ಯ ಕಟ್ಟಿಕೊಂಡ ವಿದ್ಯಾರ್ಥಿ-ವಿದ್ಯಾರ್ಥಿನಿಗಳೇ ಸಾಕ್ಷಿ

- ಡಾ. ಜಿ.ಎಂ.ಸಿದ್ದೇಶ್ವರ, ಕೇಂದ್ರ ಮಾಜಿ ಸಚಿವ

- - -

ಟಾಪ್‌ ಕೋಟ್‌

ದೇಶದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದು, ಬಸವಣ್ಣನವರ ಅನುಭವ ಮಂಟಪದಲ್ಲೂ ಸಹ ಹೆಣ್ಣುಮಕ್ಕಳಿಗೆ ಗೌರವ ಮತ್ತು ಮೊದಲ ಸ್ಥಾನ ನೀಡಲಾಗಿತ್ತು. ಮಹಿಳಾ ಮೀಸಲಾತಿಯಲ್ಲೂ ಮೊದಲ ಆದ್ಯತೆ ನೀಡಲಾಗಿದೆ. ವಿದ್ಯಾಭ್ಯಾಸದಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸಬಲ್ಲರು. ಇದೇ ಸದುದ್ದೇಶದಿಂದ ಶ್ರೀಶೈಲ ಎಜುಕೇಷನ್‌ ಟ್ರಸ್ಟ್‌ ಅಂಗ ಸಂಸ್ಥೆಗಳಲ್ಲಿ ಶಿಕ್ಷಣ ಅರಸಿ ಬಂದ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯಕ್ಕೆ ಪ್ರಾಮುಖ್ಯತೆ ಹೆಚ್ಚಾಗಿ ನೀಡಿರುವುದು ಖುಷಿ ವಿಚಾರ

- ಪ್ರಹ್ಲಾದ ಜೋಷಿ, ಕೇಂದ್ರ ಸಚಿವ

- - - -12ಕೆಡಿವಿಜಿ7, 8, 9:

ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ನೆರವೇರಿಸಿದರು. ವಿಪಕ್ಷ ನಾಯಕ ಆರ್. ಅಶೋಕ, ಕೇಂದ್ರದ ಮಾಜಿ ಸಚಿವ ಡಿ.ಎಂ. ಸಿದ್ದೇಶ್ವರ ಇತರರು ಇದ್ದರು.

-12ಕೆಡಿವಿಜಿ10:

ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ, ನೂತನ ಹಾಸ್ಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ವಿಪಕ್ಷ ನಾಯಕ ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಗಾಯತ್ರಿ ಸಿದ್ದೇಶ್ವರ, ಜಿ.ಎಂ.ಪ್ರಸನ್ನಕುಮಾರ, ಜಿ.ಎಂ.ಲಿಂಗರಾಜು ಇತರರು ಪಾಲ್ಗೊಂಡರು.