ಹತ್ತು ವರ್ಷಗಳಲ್ಲಿ ಭಾರತ ಪ್ರಪಂಚದ ಕಾರ್ಖಾನೆ
KannadaprabhaNewsNetwork | Published : Oct 08 2023, 01:15 AM IST
ಹತ್ತು ವರ್ಷಗಳಲ್ಲಿ ಭಾರತ ಪ್ರಪಂಚದ ಕಾರ್ಖಾನೆ
ಸಾರಾಂಶ
ಮುಂದಿನ ದಿನಗಳಲ್ಲಿ ಎಲ್ಲ ಉತ್ಪಾದನೆ ಭಾರತದಲ್ಲೇ ಆಗುತ್ತದೆ. ಕೌಶಲ್ಯ, ಪ್ರಮಾಣ ಹಾಗೂ ವೇಗದಿಂದ ಇದು ಸಾಧ್ಯವಾಗಲಿದೆ. ಭಾರತದಲ್ಲಿ ಈಗ ಅತೀ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ
ಕನ್ನಡಪ್ರಭ ವಾರ್ತೆ ಧಾರವಾಡ ಚೀನಾ ಪ್ರಪಂಚದ ಕಾರ್ಖಾನೆ ಎಂದು ಕರೆಯಲ್ಪಡುತ್ತಿತ್ತು. ಆದರೆ, ಸದ್ಯದ ಭಾರತದ ವೇಗ ನೋಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ಪ್ರಪಂಚದ ಕಾರ್ಖಾನೆಯಾಗಿ ಹೊರಹೊಮ್ಮಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿಯ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ನಿಮಿತ್ತ ಶನಿವಾರ ಏರ್ಪಡಿಸಿದ್ದ 50ರ ಅವಿಸ್ಮರಣೀಯ ಸಂಭ್ರಮದಲ್ಲಿ ಚೆನ್ನುಡಿ ಭಾಗ-6 ಬಿಡುಗಡೆಗೊಳಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಎಲ್ಲ ಉತ್ಪಾದನೆ ಭಾರತದಲ್ಲೇ ಆಗುತ್ತದೆ. ಕೌಶಲ್ಯ, ಪ್ರಮಾಣ ಹಾಗೂ ವೇಗದಿಂದ ಇದು ಸಾಧ್ಯವಾಗಲಿದೆ. ಭಾರತದಲ್ಲಿ ಈಗ ಅತೀ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗುತ್ತಿದೆ. ಮೊದಲು ನಾವು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದ್ದೇವು. ಈಗ ರಫ್ತು ಮಾಡುತ್ತಿದ್ದೇವೆ. ಜೊತೆಗೆ 10 ಲಕ್ಷ ಕೋಟಿಯಷ್ಟು ವ್ಯಾಪಾರ-ವಹಿವಾಟು ಭಾರತದಲ್ಲಿ ಆಗುತ್ತಿದೆ ಎಂದರು. ಭಾರತ ಅತೀ ಹೆಚ್ಚು ಯುವಕರನ್ನು ಹೊಂದಿದ ದೇಶ. ನಮ್ಮ ಮಕ್ಕಳಿಗೆ ಪರಿಪೂರ್ಣತೆ ಕಲಿಸಬೇಕಿದೆ. ಭಾರತೀಯರಿಗೆ ದೇಶ ಹಾಗೂ ವಿದೇಶದಲ್ಲಿ ವಿಫುಲ ಅವಕಾಶಗಳಿವೆ. ನಮ್ಮ ಯುವಕರು, ವಿಜ್ಞಾನಿಗಳು ಎಲ್ಲಡೆ ಮಿಂಚುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ, ಅವಕಾಶ ಸಿಕ್ಕಾಗ ಸಾಧನೆ ಮಾಡಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ಚಂದ್ರಯಾನ ಯಶಸ್ಸು ಕಂಡಿದೆ ಎಂದ ಅವರು, ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗೆ ತಕ್ಕಂತೆ ಶಿಕ್ಷಣ ನೀಡುವುದು ಇಂದಿನ ಮಹತ್ವವಾಗಿದೆ. ಹೀಗಾಗಿ ಇಂತಹ ಶಿಕ್ಷಣ ರೂಪಿಸುವುದು ಮುಖ್ಯವಾಗಿದೆ. ಯುವಕರಿಗೆ ಕೌಶಲ್ಯ, ಪ್ರಮಾಣ ಹಾಗೂ ವೇಗ ಅತೀ ಮುಖ್ಯವಾಗಿದೆ. ಜಗತ್ತು ಇದನ್ನೇ ಬಯಸುತ್ತಿದೆ. ಇವುಗಳ ಜತೆಗೆ ಉತ್ತಮ ಸಂಸ್ಕಾರವೂ ಬೇಕಿದೆ. ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ಈ ವಿಷಯಗಳ ಬಗ್ಗೆ ಗಮನಹರಿಸಬೇಕು. ಅಂದಾಗಲೇ ಸಮಾಜಕ್ಕೆ ಸಾಧಕ ಯುವಕರನ್ನು ನೀಡಲು ಸಾಧ್ಯ ಎಂದರು. ಜೆಎಸ್ಸೆಸ್ ಸಂಸ್ಥೆ ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ನೀಡುತ್ತಿದೆ. ಮುಂದಿನ 10 ವರ್ಷಗಳ ಅವಧಿಯಲ್ಲಿ ಈ ಸಂಸ್ಥೆಯಿಂದ ಕನಿಷ್ಠ 3 ವಿದ್ಯಾರ್ಥಿಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಸಕಲ ಸೌಕರ್ಯ ನೀಡಲು ಕೇಂದ್ರ ಸರ್ಕಾರ ಸದಾ ಸಿದ್ಧ ಎಂದರು. ಕಾನೂನು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಸಂಪರ್ಕ, ಆಸಕ್ತಿ ಕಡಿಮೆಯಾಗುತ್ತಿದೆ. ಹಿಂದಿನ ದಿನಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಆಸಕ್ತಿ ಅರಿತು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯೆ ಅವಿನಾಭಾವ ಸಂಬಂಧ ಇರುತ್ತಿತ್ತು. ಆದರೆ, ಇತ್ತೀಚೆಗೆ ಅದು ಕಾಣುತ್ತಿಲ್ಲ. ಶಿಕ್ಷಕರೊಂದಿಗೆ ಹೋಗಲಿ ಸಂಸ್ಥೆ ಜೊತೆಗೂ ಸಂಬಂಧ ಕಡಿತಗೊಳ್ಳುತ್ತಿದೆ ಎಂದರು. ಶಿರಸಿ ಸೋಂದೆ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಸಾಧನೆ, ದೇಶ ಮುನ್ನಡೆಯಲು ಉತ್ತಮ ಶಿಕ್ಷಣ ಅತ್ಯವಶ್ಯ. ಅಂತಹ ಶಿಕ್ಷಣವನ್ನು ಜೆಎಸ್‌ಎಸ್ ನೀಡುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆ ಸರಳತೆಯ ಸಾಕಾರ ಮೂರ್ತಿ. ಅವರ ಪರಿಶ್ರಮದಿಂದಲೇ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು. ಜೆಎಸ್ಸೆಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹಾಗೂ ಸಂಸ್ಥೆ ನಿವೃತ್ತ ಶಿಕ್ಷಕ ಆರ್.ಕೆ. ಮುಳಗುಂದ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ, ಶಾಸಕ ಮಹೇಶ ಟೆಂಗಿನಕಾಯಿ, ಹೇಮಾವತಿ ಹೆಗ್ಗಡೆ, ಶ್ರದ್ಧಾ ಹೆಗ್ಗಡೆ, ಶಿವಲೀಲಾ ಕುಲಕರ್ಣಿ, ಕೇಶವ ದೇಸಾಯಿ, ಕಮಲನಯನ ಮೆಹತಾ, ಮಹಾವೀರ ಉಪಾಧ್ಯೆ ಇದ್ದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಸೂರಜ್ ಜೈನ್ ವಂದಿಸಿದರು.