ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರವೇ ಆಗಿದೆ, ದೇಶದಲ್ಲಿ ಕೊನೆಯದಾಗಿ ಒಬ್ಬನೇ ಹಿಂದೂ ಉಳಿದರೂ ಇದು ಹಿಂದೂ ರಾಷ್ಟ್ರವೇ ಆಗಿರಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ ವಿಶ್ಲೇಷಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರವೇ ಆಗಿದೆ, ದೇಶದಲ್ಲಿ ಕೊನೆಯದಾಗಿ ಒಬ್ಬನೇ ಹಿಂದೂ ಉಳಿದರೂ ಇದು ಹಿಂದೂ ರಾಷ್ಟ್ರವೇ ಆಗಿರಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ ವಿಶ್ಲೇಷಿಸಿದರು.ರಾಷ್ಟ್ರೀಯ ಸ್ವಯಂ ಸೇವಕದ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಜರುಗಿದ ವಿಜಯದಶಮಿ ಪಥಸಂಚಲನ ನಂತರ ಬವಿವ ಸಂಘದ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಬ್ರಿಟಿಷರು ಭಾರತಕ್ಕೆ ಬಂದು ಆಳಿದರು. ಉಳಿದರು. ಹಿಂದೂ ರಾಷ್ಟ್ರ ಎಂಬುದು ಹೊಸ ವ್ಯಾಖ್ಯಾನವಲ್ಲ. ಎಂದೆಂದಿಗೂ ಇದು ಹಿಂದೂ ರಾಷ್ಟ್ರವೇ ಆಗಿರಲಿದೆ. ಒಬ್ಬನೇ ಹಿಂದೂ ಇದ್ದರೂ ಇದು ಹಿಂದೂ ರಾಷ್ಟ್ರವಾಗಿಯೇ ಗುರುತಿಸಿಕೊಳ್ಳಲಿದೆ. ಹಿಂದೂಗಳಲ್ಲಿ ಎಲ್ಲರನ್ನು ಒಳಗೊಳ್ಳುವ ವೈಶಿಷ್ಟ್ಯಪೂರ್ಣ ಗುಣವಿದೆ. ಅದನ್ನೇ ನಮ್ಮ ಪುರಾಣ, ಉಪನಿಷತ್ತುಗಳು ಹೇಳಿದವು, ಬಸವಣ್ಣನವರೂ ಅದನ್ನೇ ಪ್ರತಿಪಾದಿಸಿದರು ಎಂದು ಹೇಳಿದರು.ಹಿಂದೂ ಸಮಾಜ ತನ್ನಲ್ಲಿರುವ ದೌರ್ಬಲ್ಯ, ವಿಕೃತಿಗಳನ್ನು ಹಿಮ್ಮೆಟ್ಟಿಸಿ ಮುಂದೆ ಬರಬೇಕಿದೆ. ಸಂಘಕ್ಕೆ ಶತಮಾನವಾಗಿರುವುದು ಹೆಮ್ಮೆಯ ವಿಷಯ ಆದರೆ ನಾವು ಅಂದುಕೊಂಡಷ್ಟು ವೇಗದಲ್ಲಿ ಗುರಿ ಸಾಧನೆ ಆಗಿಲ್ಲ. ಭಾರತ ವಿಶ್ವ ಗುರುವಾಗಬೇಕು. ಜಗತ್ತಿನ ಮುಂದೆ ನಾವು ಶಕ್ತಿಶಾಲಿಗಳಾಗಬೇಕೆಂಬುದು ನಮ್ಮ ಧ್ಯೇಯವಲ್ಲ. ಭಾರತ ವಿಶ್ವಗುರುವಾಗಿಸುವುದರ ಮೂಲಕ ಜಗತ್ತಿನ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಲೋಕಲ್ಯಾಣ ಎಂಬುದು ಹಿಂದೂಗಳ ಗುಣದಲ್ಲೇ ಅಡಗಿದೆ ಎಂದರು.
ಸಮಾಜಕ್ಕೆ ಪಿಡುಗಾಗಿರುವ ಮತಾಂತರ, ಲವ್ ಜಿಹಾದ್ ಹಾಗೂ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ ಆಗಬೇಕು. ಪರಿಸರ ಸಂರಕ್ಷಣೆ, ಸಹೋದರತ್ವ, ಕೂಡು ಕುಟುಂಬವೂ ಸೇರಿದಂತೆ ಪಂಚ ಪರಿವರ್ತನೆಗಳ ಬಗ್ಗೆ ಯೋಚಿಸಬೇಕು. ವಿಜಯದಶಮಿ ಸಂದರ್ಭದಲ್ಲಿ ಶಮಿ ಪೂಜೆ ಎಂದು ಬನ್ನಿಗಿಡಕ್ಕೆ ಪೂಜೆ ಸಲ್ಲಿಸುತ್ತೇವೆ. ಅದು ಪ್ರಕೃತಿಯನ್ನು ತಂಪಾಗಿಸುತ್ತದೆ ಎಂಬುದು ನಂಬಿಕೆ. ನಮ್ಮಿಂದ ಪರಿಸರಕ್ಕೆ ಏನೆಲ್ಲ ಕೊಡುಗೆ ನೀಡಲು ಸಾಧ್ಯವೋ ಅದೆಲ್ಲವನ್ನೂ ಮಾಡಬೇಕು. ನವರಾತ್ರಿ ಎಂದರೆ ಶಕ್ತಿಯ ಆರಾಧನೆ. ನಾವೆಲ್ಲರೂ ಸಂಕಲ್ಪಗೈದ್ಯ ಒಳ್ಳೆಯದನ್ನು ಆಶಿಸಬೇಕೆಂದು ಹೇಳಿದರು.ವಿಜಯಪುರ-ಬಾಗಲಕೋಟೆ ಕೆಎಂಎಫ್ ನಿರ್ದೇಶಕ ವಿವೇಕಾಂದ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ ವೇದಿಕೆಯಲ್ಲಿದ್ದರು.