ಮಂಗಳೂರು: ಭಾರತೀಯ ಸೈನ್ಯದ ತ್ಯಾಗ, ಸಾಹಸಗಳನ್ನು ಆಸಕ್ತ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಶ್ರೀಶಾ ಸೌಹಾರ್ದ ಸೊಸೈಟಿಯು ನಗರದ ಭಾರತ್ ಮಾಲ್‌ ಚಿತ್ರ ಮಂದಿರದಲ್ಲಿ ‘ಬಾರ್ಡರ್- 2’ ಚಲನಚಿತ್ರದ ಉಚಿತ ಪ್ರದರ್ಶನವನ್ನು ಭಾನುವಾರ ಸಂಜೆ ಏರ್ಪಡಿಸಿತ್ತು.ಶ್ರೀಶಾ ಸೊಸೈಟಿಯು 200 ಜನರಿಗೆ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು. ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರನ್ನೂ ಆಹ್ವಾನಿಸಲಾಗಿತ್ತು. ನಂತರ ವಾಯು ದಳದ ಮಾಜಿ ಸಾರ್ಜೆಂಟ್ ಯಶವಂತ ಶೆಟ್ಟಿ ಅವರು 1971ರ ಬಾಂಗ್ಲಾ ವಿಮೋಚನೆಯ ಯುದ್ಧದ ಸಂದರ್ಭವನ್ನು ಮನಮುಟ್ಟುವಂತೆ ಚಿತ್ರಮಂದಿರದಲ್ಲಿ ನೆರೆದಿದ್ದ ವೀಕ್ಷಕರಿಗೆ ವಿವರಣೆ ನೀಡಿದ್ದು ಎಲ್ಲರ ಮನಸೂರೆಗೊಂಡಿತು.

ವೀಕ್ಷಕರೊಂದಿಗೆ ನಡೆದ ಸಂವಾದದಲ್ಲಿ ಶ್ರೀಶಾ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಮಾತನಾಡಿ, ಶ್ರೀಶಾ ಸೊಸೈಟಿಯ ಮೂಲ ಉದ್ದೇಶ ವ್ಯವಹಾರದ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಗಳನ್ನು ಆಯೋಜಿಸುವ ಮೂಲಕ ಸಮಾಜದ ಋಣ ತೀರಿಸುವುದು. ನಮಗೆ ದೇಶ ಮೊದಲು, ನಂತರ ನಾವು, ನಮ್ಮದು ಎಲ್ಲ. ಈ ನಿಟ್ಟಿನಲ್ಲಿ ನಮ್ಮ ಸೈನಿಕರ ತ್ಯಾಗ, ಬಲಿದಾನಗಳನ್ನು ವಸ್ತುನಿಷ್ಠವಾಗಿ ತಿಳಿಸುವ ‘ಬಾರ್ಡರ್-2’ ಚಲನಚಿತ್ರವನ್ನು ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಣೆಗೆ ಏರ್ಪಾಡು ಮಾಡಲಾಗಿದೆ. ಇದರಿಂದ ದೇಶ, ಸೈನ್ಯದ ಬಗ್ಗೆ ಅಭಿಮಾನ, ಗೌರವ ಇಮ್ಮಡಿಯಾಗಲಿ ಎಂದು ಹೇಳಿದರು.

ಶ್ರೀಶಾ ಸೊಸೈಟಿಯ ಸಿಬ್ಬಂದಿ ವರ್ಗ, ಆಡಳಿತ ಮಂಡಳಿಯ ಸದಸ್ಯರು, ಹಿತೈಷಿಗಳು, ಮಾಜಿ ಸೈನಿಕರು ಚಲನಚಿತ್ರವನ್ನು ವೀಕ್ಷಿಸಿದರು. ಚಲನಚಿತ್ರ ಪ್ರದರ್ಶನ ಮಾಡಲು ನೌಕಾದಳದ ಮಾಜಿ ಅಧಿಕಾರಿ ಸುಧೀರ್ ಪೈ ಸಹಕರಿಸಿದರು.