ಸಾರಾಂಶ
ಗದಗ: ಭಾರತದ ಸೈನ್ಯವು ಸಮರ್ಥ ಹಾಗೂ ಬಲಿಷ್ಠವಾಗಿದ್ದು, ಸೈನಿಕರು ಭಾರತಾಂಬೆಯ ಹೆಮ್ಮೆಯ ವೀರ ಪುತ್ರರು. ಹಗಲಿರುಳೆನ್ನದೇ ದೇಶವನ್ನು ಕಾಯ್ದು-ರಕ್ಷಿಸಿ, ನಮ್ಮೆಲ್ಲರಿಗೆ ರಕ್ಷಣೆ ನೀಡುತ್ತಿರುವ ಸೈನಿಕರ ಪಾತ್ರ ಅನುಪಮವಾದದ್ದು ಎಂದು ಇನ್ನರ್‌ವ್ಹಿಲ್ ಕ್ಲಬ್ ಗದಗ ಬೆಟಗೇರಿ ಅಧ್ಯಕ್ಷೆ ಅಶ್ವಿನಿ ಜಗತಾಪ ಹೇಳಿದರು. ಅವರು ಶನಿವಾರ ಗದುಗಿನ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ಗದಗ-ಬೆಟಗೇರಿ ಇನ್ನರ್‌ವ್ಹಿಲ್ ಕ್ಲಬ್ ಆಯೋಜಿಸಿದ್ದ ಮಾಜಿ ಸೈನಿಕರಿಗೆ ಸ್ಫೂರ್ತಿಯ ರಕ್ಷಾ ಬಂಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕುಟುಂಬದಿಂದ ದೂರ ಉಳಿದು, ದೇಶ ರಕ್ಷಣೆಗಾಗಿ ಇಡೀ ಜೀವನವನ್ನೇ ಹೋರಾಟಕ್ಕೆ ಮೀಸಲಿರಿಸಿದ ಸೈನಿಕರು ದೇಶ ರಕ್ಷಣೆ ಮಾಡುವ ಶೂರ ಹಾಗೂ ಶೌರ್ಯವಂತರು ಎಂಬ ಹೆಮ್ಮೆ ನಮ್ಮೆಲ್ಲರಿಗಿದೆ. ಶತ್ರುಗಳ ಎದೆಯಲ್ಲಿ ನಡುಕು ಹುಟ್ಟಿಸಿ ದೇಶ ರಕ್ಷಣೆಯೊಂದೇ ಗುರಿಯಾಗಿಟ್ಟುಕೊಂಡು ಚಳಿ, ಮಳೆ, ಬಿಸಿಲೆನ್ನದೆ ನಿರಂತರ ಕಾಯಕ ನಿರತರಾದ ಕಾಯಕಯೋಗಿಗಳು ಎಂದು ಬಣ್ಣಿಸಿದರು.ಸನ್ಮಾನಗೊಂಡು ಮಾತನಾಡಿದ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಸೈನ್ಯದಲ್ಲಿ ಭಾರತೀಯ ಬಂಧುಗಳ ಹಾರೈಕೆಯಿಂದ ಸೇವೆ ಸಲ್ಲಿಸಿ ವೃತ್ತಿ ಘನತೆಯನ್ನು ಎತ್ತಿ ಹಿಡಿದ ಹೆಮ್ಮೆ ನಮ್ಮ ಸೈನಿಕರ ಬಳಗಕ್ಕೆ ಇದೆ. ನನ್ನ ದೇಶ ನನ್ನ ಜನ ಎಂಬ ಧ್ಯೇಯದೊಂದಿಗೆ ಸೈನ್ಯ ಸದಾ ಸನ್ನದ್ಧವಾಗಿದೆ, ಇನ್ನರ್‌ವ್ಹಿಲ್ ಕ್ಲಬ್‌ನ ಸಹೋದರಿಯರು ರಕ್ಷಾಬಂಧನವನ್ನು ನಮ್ಮೊಂದಿಗೆ ಆಚರಿಸಿ ಸೈನ್ಯ ಹಾಗೂ ಸೈನಿಕರಿಗೆ ಮಾತೃಶಕ್ತಿಯನ್ನು ತುಂಬಿದ್ದಾರೆ ಎಂದರು. ಮಾಜಿ ಸೈನಿಕ, ನ್ಯಾಯವಾದಿ ಸುಧೀರಸಿಂಹ ಘೋರ್ಪಡೆ ಮುಂತಾದವರು ಮಾತನಾಡಿದರು. ಇನ್ನರ್‌ವ್ಹಿಲ್ ಕ್ಲಬ್ ಗದಗ ಬೆಟಗೇರಿ ವತಿಯಿಂದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಕಾರ್ಯದರ್ಶಿ ಶಿವಲೀಲಾ ಅಕ್ಕಿ ನಿರೂಪಿಸಿ ವಂದಿಸಿದರು. ಜಯಶ್ರೀ ಉಗಲಾಟ, ಪುಷ್ಪಾ ಬಂಡಾರಿ, ವೀಣಾ ಕಾವೇರಿ, ಶಾರದಾ ಸಜ್ಜನರ, ವಿದ್ಯಾ ಗಂಜಿಹಾಳ, ಮಾಜಿ ಸೈನಿಕರಾದ ಸಿ.ಜಿ. ಸೊನ್ನದ, ವ್ಹಿ.ಬಿ. ಬಿಂಗಿ, ಎಂ.ಎಸ್. ಗುಜ್ಜಲ, ಎಸ್.ಎಸ್. ವಡ್ಡಿನ, ಮಾರುತಿ ಕಿರೇಸೂರ, ಬಸವರಾಜ ಇಟಗಿ, ಪಿ.ಎಂ. ಜಂಬಗಿ, ಬಿ.ವ್ಹಿ. ಅಬ್ಬಿಗೇರಿ, ಚನ್ನಯ್ಯ ಬಳಗಾನೂರಮಠ, ಎಸ್.ಎ.ಪಾಟೀಲ, ಎಂ.ಎಸ್. ಹಿರೇಹಾಳ, ಎಸ್.ಕೆ. ಪಾಟೀಲ, ಲಕ್ಷ್ಮಣ ಮುಧೋಳ, ಬಿ.ಎಲ್. ಪಾಟೀಲ, ಸಣ್ಣಸಿದ್ಧಪ್ಪನವರ, ಎಸ್.ಬಿ. ಸರ್ವಿ, ಕೆ.ಎಸ್. ಹಿರೇಮಠ, ಎಸ್.ಎಫ್. ಹೊನ್ನಪ್ಪನವರ, ಈರಣ್ಣ ತಾಳಕೇರಿ, ಬಿ.ಎಂ. ಹುಯಿಲಗೋಳ ಮುಂತಾದವರು ಹಾಜರಿದ್ದರು.