ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಇಡೀ ಜಗತ್ತು ಕಂಡ ಶ್ರೇಷ್ಠ ಮತ್ತು ಪವಿತ್ರ ಸಂವಿಧಾನಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನವೂ ಒಂದಾಗಿದ್ದು, ಸರ್ವಸಮತೆಗೆ ಹಿಡಿದ ಕನ್ನಡಿಯಾಗಿದೆ, ನವೆಂಬರ್ 26 ಸಂವಿಧಾನ ಜಾರಿಯಾದ ದಿನದ ಸವಿನೆನಪಿಗಾಗಿ ಇಂದು ಸಂವಿಧಾನ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಸಂವಿಧಾನ ಜಾರಿಯಾದ ನವೆಂಬರ್ 26 ರ ಸವಿನೆನಪಿಗಾಗಿ ಸಂವಿಧಾನ ಪೀಠಿಕೆ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಜನವರಿ 26 ರಂದು ಭಾರತೀಯರಾದ ನಾವೆಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ, ಆದರೆ ಸಂವಿಧಾನ ರಚನಾ ಕಾರ್ಯ 1949 ನವೆಂಬರ್ 26 ರಂದು ಸಂಪೂರ್ಣವಾಗಿ ಮುಗಿಯುತ್ತದೆ, ಆ ನಿಟ್ಟಿನಲ್ಲಿ ಆ ದಿನ ಸಂವಿಧಾನವನ್ನು ಅಧಿಕೃತವಾಗಿ ಅನುಮೋದಿಸಿ ಅಂಗೀಕರಿಸಲಾಗಿರುತ್ತದೆ, ಈ ನಿಟ್ಟಿನಲ್ಲಿ 2015 ರಲ್ಲಿ ಸರ್ಕಾರ ನವೆಂಬರ್ 26 ರಂದು ಎಲ್ಲರೂ ಸಂವಿಧಾನ ದಿನವಾಗಿ ಆಚರಿಸಲು ಸುತ್ತೋಲೆ ಹೊರಡಿಸಿದೆ, ಸಂವಿಧಾನ ಭಾರತೀಯರ ಸರ್ವ ಶ್ರೇಷ್ಠ ಕಾನೂನು ಗ್ರಂಥವಾಗಿದೆ ಎಂದು ಹೇಳಿದರು.ಈ ದಿನ ಸಂವಿಧಾನ ಪೀಠಿಕೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ, ಭಾರತೀಯರಾದ ನಾವೆಲ್ಲರೂ ದೇಶದ ಕಾನೂನು ಅರಿಯಬೇಕಿದೆ, ಅದರಲ್ಲೂ ವಿಶೇಷವಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾನತೆ ಸಾಧಿಸಲು ಸಂವಿಧಾನವು ಸರ್ವರಿಗೂ ಸರ್ವಸಮತೆಯನ್ನು ಕರುಣಿಸಿದೆ, ಸರ್ಕಾರ ಇತ್ತೀಚೆಗೆ ಸಂವಿಧಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ವಿಶೇಷ ಅಭಿಯಾನಗಳು, ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದೆ, ಸಂವಿಧಾನವನ್ನು ಅಧ್ಯಯನ ಮಾಡಿದರೆ ದೇಶದ ಕಾನೂನು ಅರಿತಂತೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ದಲಿತ ಮುಖಂಡ ಶಿವಮೂರ್ತಿ ಗುತ್ತಿನಕೆರೆ ಮಾತನಾಡಿ, ವೈವಿಧ್ಯಮಯ ಭಾರತದಂಥ ಒಂದು ದೇಶದ ಸಂವಿಧಾನವನ್ನು ಬರೆಯುವುದು ಮತ್ತು ಕರಡು ರಚಿಸುವುದು ಸುಲಭದ ಮಾತಲ್ಲ, ಈ ನಿಟ್ಟಿನಲ್ಲಿ ವಿಶ್ವದ ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅದನ್ನು ಅರ್ಥೈಸಿಕೊಂಡು ನಮ್ಮ ದೇಶಕ್ಕೆ ಹೊಂದಿಕೆಯಾಗುವ ಹಾಗೂ ಸರ್ವರಿಗೂ ಅನ್ವಯವಾಗುವಂಥ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜ್ಞಾನ ಸಂಪತ್ತು ಮತ್ತು ತಾಳ್ಮೆ ಅವರ ಮನಸ್ಸಿನಲ್ಲಿದ್ದ ತುಳಿತಕ್ಕೊಳಗಾದ ಅಪಾರ ಸಮುದಾಯಗಳ ಪರಿಸ್ಥಿತಿಯ ಪರಿಕಲ್ಪನೆ ಅಗಾಧವಾದುದು,1949 ನವೆಂಬರ್ 26ರ ದಿನವನ್ನು ಇಡೀ ಭಾರತೀಯರೆಲ್ಲರೂ ಸ್ಮರಿಸಬೇಕಾಗಿದೆ ಎಂದರು.ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ದಿನಕ್ಕೆ ಶುಭ ಹಾರೈಸಿದರು.
ತಾಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ. ಪಿ. ಚಂದ್ರಯ್ಯ, ದಲಿತ ಮುಖಂಡರಾದ ಶಂಕರಪ್ಪ ಸಂಕೋಡನಹಳ್ಳಿ, ರಂಗನಾಥ ಮಾಡಾಳು, ರುದ್ರೇಶ್ ಹಬ್ಬನಘಟ್ಟ, ನಿವೃತ್ತ ಉಪನ್ಯಾಸಕ ರಮೇಶ್, ಹುಲಿಯಪ್ಪ, ಭಾಸ್ಕರ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.