ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರುಗಣರಾಜ್ಯೋತ್ಸವವು ಭಾರತೀಯರಾದ ನಾವು ನಮ್ಮ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ಐತಿಹಾಸಿಕ ದಿನವಾಗಿದ್ದು, ನಮ್ಮ ಸಂವಿಧಾನವು ವಿಶ್ವದ ಅತೀ ಶ್ರೇಷ್ಠ ಸಂವಿಧಾನ ಎಂದೆಣಿಸಿಕೊಂಡಿದೆ. ಸಂವಿಧಾನದ ಆಶಯವನ್ನು ಬಲಪಡಿಸುವ ಕೆಲಸ ನಮ್ಮಿಂದಾಗಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅಭಿಪ್ರಾಯಪಟ್ಟರು.
ಅವರು ಕೊಂಬೆಟ್ಟು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾದ ಭಾರತವು ಸಮಾನತೆ, ನ್ಯಾಯಪರತೆ ಮತ್ತು ಸಹೋದರತೆಯ ಆಧಾರಿತ ದೇಶವಾಗಿದ್ದು, ಸರ್ವಧರ್ಮ, ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಜನರು ತಮ್ಮ ಹಕ್ಕು ಕರ್ತವ್ಯಗಳನ್ನು ಪಾಲಿಸುವುದರ ಜತೆಗೆ ದೇಶದ ಶಿಸ್ತನ್ನು ಉಳಿಸಕೊಳ್ಳಬೇಕಾಗಿದೆ. ನೈತಿಕತೆ ಮತ್ತು ಮಾನವೀಯತೆಯ ಸಮಾಜವನ್ನು ಕಟ್ಟಬೇಕಾಗಿದೆ ಎಂದರು.
ಈ ಸಂದರ್ಭ ಕ್ರೀಡಾ ಸಾಧಕ ವಿದ್ಯಾರ್ಥಿಗಳಾದ ಕೀರ್ತಿ, ಸಿಂಚನಾ, ದನ್ವಿತ್, ಸ್ವೀಕೃತ್ ಆನಂದ್ ತ್ರಿಶೂಲ್ ಗೌಡ ಅವರನ್ನು ಸನ್ಮಾನಿಸಲಾಯಿತು.* ಆಕರ್ಷಕ ಪಥಸಂಚಲನ:ಗಣರಾಜ್ಯೋತ್ಸವ ಪ್ರಯುಕ್ತ ಆಕರ್ಷಕ ಪಥಸಂಚಲನ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪಥಸಂಚಲನ ನಿರೂಪಿಸಿದ ಪೊಲೀಸ್ ಇಲಾಖೆ (ಪ್ರಥಮ), ಸಂತ ಫಿಲೋಮಿನಾ ಎನ್‌ಸಿಸಿ ಕೆಡೆಟ್ (ಧ್ವಿತೀಯ) ಹಾಗೂ ವಿವೇಕಾನಂದ ಪ್ರಥಮದರ್ಜೆ ಕಾಲೇಜು ಎನ್ ಸಿಸಿ ತೃತೀಯ ಬಹುಮಾನ ಪಡೆದುಕೊಂಡವು. ಸ್ತಬ್ಧಚಿತ್ರದಲ್ಲಿ ಅರಣ್ಯ ಇಲಾಖೆ ಪ್ರಥಮ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದ್ವಿತೀಯ ಹಾಗೂ ಮೆಸ್ಕಾಂ ಇಲಾಖೆ ತೃತೀಯ ಬಹುಮಾನ ಪಡೆದುಕೊಂಡರು.ವೇದಿಕೆಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಜೆ. ಶಿವಶಕರ, ನಗರಸಭಾ ಸದಸ್ಯ ಪಿ.ಜಿ.ಜಗನ್ನೀವಾಸ ರಾವ್, ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸರ್ಕಲ್ ಇನ್‌ಸ್ಪೆಕ್ಟರ್ ಸುನೀಲ್ ಇದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವಂದಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಭವ್ಯಾ ವೇಣುಗೋಪಾಲ್ ನಿರೂಪಿಸಿದರು.ಪುತ್ತೂರಿನ ಕಿಲ್ಲೆ ಮೈದಾನದಿಂದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಅಮರ್ ಜವಾನ್ ಜ್ಯೋತಿಗೆ ಪುಷ್ಪನಮನ ಸಲ್ಲಿಸಿದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಮೆರವಣಿಗೆಗೆ ಚಾಲನೆ ನೀಡಿದರು. ಪುತ್ತೂರಿನ ನಗರಸಭೆ, ತಾಲೂಕು ಪಂಚಾಯಿತಿ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಸಿಡಿಪಿಒ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ತೋಟಗಾರಿಕೆ ಇಲಾಖೆ, ಮೆಸ್ಕಾಂ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಕಿಲ್ಲೆ ಮೈದಾನದಿಂದ ಹೊರಟ ಮೆರವಣಿಗೆ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಕೊನೆಗೊಂಡಿತು. ಕೊಂಬೆಟ್ಟು ಕ್ರೀಡಾಂಗಣದಲ್ಲಿ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.