ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅಭಿಯೋಜಕರ ಪಾತ್ರ ಬಹುಮುಖ್ಯವಾಗಿದೆ.
ಬಳ್ಳಾರಿ: ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅಭಿಯೋಜಕರ ಪಾತ್ರ ಬಹುಮುಖ್ಯವಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ವರ್ತಿಕಾ ಕಟಿಯಾರ್ ಹೇಳಿದರು.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗಳ ಆಶ್ರಯದಲ್ಲಿ ನಗರದ ಹಳೆಯ ನ್ಯಾಯಾಲಯ ಆವರಣದ ಅಭಿಯೋಜಕ ಭವನದಲ್ಲಿ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನೂತನ ಕಾನೂನು ಅಧಿಕಾರಿ (ಹಿರಿಯ) ಯವರ ಬಳ್ಳಾರಿ ವಿಭಾಗೀಯ ಕಚೇರಿಯ ಉದ್ಘಾಟನೆ ನೆರವೇರಿಸಿ ಬಳಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಭಿಯೋಜಕರು ಮತ್ತು ತನಿಖಾಧಿಕಾರಿಗಳ ನಡುವೆ ಸಮನ್ವಯ ಸಾಧಿಸಬೇಕು. ತನಿಖಾಧಿಕಾರಿಗಳು ಯಾವ ರೀತಿಯಾಗಿ ದೋಷರೋಪಣಾ ಪಟ್ಟಿ ತಯಾರಿಸಬೇಕು. ಅದಕ್ಕಿರುವ ಕಾನೂನು ಕ್ರಮ ಹಾಗೂ ಇತರೆ ಕುರಿತಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಕಾನೂನು ಹಿರಿಯ ಅಧಿಕಾರಿಗಳು ಚರ್ಚಿಸಿದ್ದು, ಮುಂದೆಯೂ ನಿರಂತರ ಚರ್ಚಿಸುವರು. ಇದರಿಂದ ಜನಸಾಮಾನ್ಯರಿಗೆ ನ್ಯಾಯ ದೊರಕಿಸಲು ಅಭಿಯೋಜಕರ ಪಾತ್ರದೊಂದಿಗೆ ಪರಿಣಾಮಕಾರಿಯಾಗಿ ಸಾಧ್ಯವಾಗಲಿದೆ ಎಂದು ಹೇಳಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ಪ್ರಸ್ತುತದ ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದಮೇಲೆ ಕಾನೂನು ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಸಂತ್ರಸ್ತರು ಇರುವಲ್ಲಿಯೇ ನ್ಯಾಯ ಅವರ ಹತ್ತಿರವಾಗುತ್ತಿದೆ ಎಂದು ಹೇಳಿದರು.ಈ ಹಿಂದೆ ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಬಹಳಷ್ಟು ಅಂತರವಿತ್ತು. ಈಗ ಯಾವುದೇ ಪ್ರಕರಣವಿರಲಿ ತ್ವರಿತವಾಗಿ ಪತ್ತೆಮಾಡಿ ಇತ್ಯರ್ಥಗೊಳಿಸುವ ಮೂಲಕ ಪೊಲೀಸ್ ಇಲಾಖೆಯು ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿ ಜನಸ್ನೇಹಿ ಆಡಳಿತ ಸೇವೆ ನೀಡುತ್ತಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ ಮಾತನಾಡಿ, ವಕೀಲರು ಮತ್ತು ಕಕ್ಷಿದಾರರು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನೂತನ ಕಾನೂನು ಅಧಿಕಾರಿಯವರ ಬಳ್ಳಾರಿ ವಿಭಾಗೀಯ ಕಚೇರಿಯು ನಾಲ್ಕು ಜಿಲ್ಲೆಗಳಿಗೆ ಕೇಂದ್ರಸ್ಥಾನವಾಗಿ ಆರಂಭಗೊಂಡಿರುವುದು ಜಿಲ್ಲೆಯ ಸೌಭಾಗ್ಯವಾಗಿದೆ. ಇಲಾಖೆಗೆ ಬೇಕಾದ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಿಂದ ಒದಗಿಸಿಕೊಡಲಾಗುವುದು ಎಂದು ಹೇಳಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಕಲಬುರಗಿ ವಿಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ವಿಜಯನಗರ ಸೇರಿ ನಾಲ್ಕು ಜಿಲ್ಲೆಗಳಿಗೆ ಬಳ್ಳಾರಿ ವಲಯ ಕಚೇರಿ ಸೇವೆ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೇವಲ 2 ತಿಂಗಳಲ್ಲಿ ಕಟ್ಟಡ ಗುರುತಿಸಿ ಅದನ್ನು ಆರಂಭಿಸಿರುವುದು ಕಾನೂನು ಹಿರಿಯ ಅಧಿಕಾರಿಯವರ ಕಾರ್ಯ ವೈಖರಿ ಪ್ರತಿಬಿಂಬಿಸುತ್ತಿದೆ ಎಂದರು.ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಬೆಂಗಳೂರಿನ ನಿರ್ದೇಶಕಿ ಅಂಜಲಿದೇವಿ ಮಾತನಾಡಿದರು.
ಬಳ್ಳಾರಿ ವಿಭಾಗೀಯ ಕಚೇರಿಯ ನೂತನ ಕಾನೂನು ಅಧಿಕಾರಿ (ಹಿರಿಯ) ಬಿ.ಎಸ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್.ಪಾಟೀಲ,ಬಳಿಕ ಕಾರ್ಯಕ್ರಮದಲ್ಲಿ ‘ನೊಂದವರಿಗೆ ನ್ಯಾಯ’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ‘ನ್ಯಾಯ ಜ್ಯೋತಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು ಮತ್ತು ಬಳ್ಳಾರಿ ವಿಭಾಗೀಯ ಕಚೇರಿಯ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.
ಬಳ್ಳಾರಿ ಎಸ್ಪಿ ಡಾ.ಶೋಭಾರಾಣಿ, ವಿಜಯನಗರ ಎಸ್ಪಿ ಎಸ್.ಜಾಹ್ನವಿ, ಕೊಪ್ಪಳ ಎಸ್ಪಿ ಡಾ.ರಾಮ ಅರಸಿದ್ದಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಬಾಬು, ಲೋಕೋಪಯೋಗಿ ಇಲಾಖೆ ವಿಭಾಗದ ಕಾರ್ಯಪಾಲಕ ಅಭಿಯಂತರ ಹೇಮರಾಜ.ಕೆ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಇದ್ದರು.13ಬಿಆರ್‌ವೈ1
ಕಾನೂನು ಅಧಿಕಾರಿಯವರ ಬಳ್ಳಾರಿ ವಿಭಾಗೀಯ ಕಚೇರಿಯನ್ನು ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ವರ್ತಿಕಾ ಕಟಿಯಾರ್ ಉದ್ಘಾಟಿಸಿದರು.