ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಕೃತಿ ಕೇಂದ್ರಿತ ವಿಕಾಸದ ಮೂಲ ಪರಿಕಲ್ಪನೆಯೊಂದಿಗೆ ಬರುವ ಜನವರಿಯಲ್ಲಿ 9 ದಿನ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸೇಡಂನ ಕಾಗಿಣಾ ತೀರದಲ್ಲಿ ಭರದ ಸಿದ್ಧತೆಗಳು ಸಾಗಿವೆ.ಕಳೆದೊಂದು ದಶಕದ ಹಿಂದೆ ಕಲಬುರಗಿ ಕಂಪು ಎಂಬ ಜ್ಞಾನ, ವಿಕಾಸ ಆಧಾರಿತ ವಿರಾಟ್ ಸಮಾರಂಭ ಆಯೋಜಿಸಿರುವ ಖ್ಯಾತಿಯ ಬಸವರಾಜ ಪಾಟೀಲ್ ಸೇಡಂ ಮತ್ತವರ ಸಮಾನ ಮನಸ್ಕ ಗೆಳೆಯರು, ಚಿಂತಕರ ತಂಡ ಇದೀಗ ಸೇಡಂ ಪಟ್ಟಣದ ಬಳಿ, ಕಾಗಿಣಾ ನದಿ ತೀರದಲ್ಲಿ, ರಾಷ್ಟ್ರರೂಟರು ಆಳಿದ ನೆಲದಲ್ಲಿ 240 ಎಕರೆಯಲ್ಲಿ 7ನೇ ಭಾರತ ಸಂಸ್ಕೃತಿ ಉತ್ಸವ ಆಯೋಜಿಸಲು ಮುಂದಾಗಿದೆ.
ಇಂದಿಲ್ಲಿ ವಿಕಾಸ ಅಕಾಡೆಮಿ ಕಚೇರಿಲ್ಲಿ ಸುದ್ದಿಗೋಷ್ಠಿ ನಡೆಸಿದ ವಿರಾಟ್ ಸಾಂಸ್ಕತಿಕ ಸಂಗಮದ ಮುಖ್ಯ ಸಂಯೋಜಕ ಡಾ. ಬಸವರಾಜ ಪಾಟೀಲ್ ಸೇಡಂ ಅವರು, 2025ರ ಜ.29ರಿಂದ ಫೆ.6ರ ವರೆಗೆ 9 ದಿನಗಳ ಕಾಲ ನಡೆಯುವ ಐತಿಹಾಸಿಕ ಭಾರತೀಯ ಸಂಸ್ಕೃತಿ ಪರಿಚಯದ ಉತ್ಸವದ ಕುಂಭಮೇಳದ ನಂತರ ಅತೀ ಹೆಚ್ಚು ಜನ ಸೇರಲಿರುವ ಉತ್ಸವವಾಗಿ ಹೊರೊಹಮ್ಮಲಿದ್ದು, ಅಂದಾಜಿನಂತೆ 30 ಲಕ್ಷಕ್ಕೂ ಹೆಚ್ಚು ಜನ ಈ 9 ದಿನಗಳಲ್ಲಿ ಬಂದು ಹೋಗುವ ಲೆಕ್ಕಾಚಾರವಿದೆ ಎಂದು ಬಸವರಾಜ ಪಾಟೀಲರು ಹೇಳುತ್ತ ಉತ್ಸವದ ಹಿರಿಮೆ ಗರಿಮೆ ಪಟ್ಟಿ ಮಾಡಿದರು.ಬೀರನಳ್ಳಿ ಬಳಿ 240 ಎಕರೆಯಲ್ಲಿ ವಿಸ್ಮಯ ಲೋಕ ಸೃಷ್ಟಿ: ಪ್ರಕೃತಿಯಿಂದ ಸಂಸ್ಕೃತಿಯೆಡೆಗೆ ಎಂಬುದು ಈ ಉತ್ಸವದ ಘೋಷವಾಕ್ಯ. ಸೇಡಂನಿಂದ 8 ಕಿಮೀ, ಕಲಬುರಗಿಯಿಂದ 40 ಕಿಮೀ ದೂರದಲ್ಲಿರುವ ಬೀರನಹಳ್ಳಿ ಉಪರಸ್ತೆ ಪಕ್ಕ 240 ಎಕರೆ ಪ್ರದೇಶದಲ್ಲಿ 9 ದಿನಗಳ ಉತ್ಸವಕ್ಕೆ ಭರದ ಸಿದ್ಧತೆ ಈಗಾಗಲೇ ಶುರುವಾಗಿವೆ.
ಭಾರತ ಒಳಗೊಂಡಂತೆ ಹಲವು ದೇಶಗಳ ಸುಮಾರು 30 ಲಕ್ಷಕ್ಕೂ ಅಧಿಕ ಆಸಕ್ತರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರಕೃತಿ ಕೇಂದ್ರಿತ ವಿಕಾಸ ಚಿಂತನೆಗಳ ರೂವಾರಿ ಕೆ.ಎನ್. ಗೋವಿಂದಾಚಾರ್ಯ ಕನಸಿನ ಈ ಉತ್ಸವವನ್ನು ಸಿದ್ಧೇಶ್ವರ ಸ್ವಾಮೀಜಿ, ದಿ. ಎಲ್.ನಾರಾಯಣರೆಡ್ಡಿ, ಇತ್ತೀಚೆಗೆ ನಿಧನರಾದ ಕೃಷಿ ವಿಜ್ಞಾನಿ ಎಸ್.ಎ. ಪಾಟೀಲ್, ಸ್ವದೇಶಿ ಚಳವಳಿಯ ಮೇರು ವ್ಯಕ್ತಿತ್ವ ರಾಜೀವ್ ದೀಕ್ಷಿತ್ ಅವರಿಗೆ ಸಮರ್ಪಣೆ ಮಾಡಲಾಗುತ್ತದೆ ಎಂದು ಪಾಟೀಲರು ವಿವರಿಸಿದರು.50ಕ್ಕೂ ಅಧಿಕ ಪದ್ಮಶ್ರೀ ಪುರಸ್ಕೃತರು, ನೂರಾರು ವಿಜ್ಞಾನಿಗಳು, ಸಾವಿರಾರು ಪದವಿ, ಸ್ನಾತಕ ಪದವಿ ವಿದ್ಯಾರ್ಥಿಗಳು, ಸಂಶೋಧಕರು ಈ ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರಾದ ನಿತೀನ್ ಗಡ್ಕರಿ, ಮನುಸುಖ ಮಾಂಡವಿಯಾ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳಲ್ಳಲಿದ್ದಾರೆ.
ಉತ್ಸವದ ಭಾಗವಾಗಿ ನಡೆಯಲಿರುವ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಒಂದು ಲಕ್ಷ ಯೋಗ ಪಟುಗಳು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 9 ತಿಂಗಳಲ್ಲಿ 55 ಸಾವಿರ ಜನರಿಗೆ ಒಂದು ಪ್ರಶಿಕ್ಷಣ ನೀಡಲಾಗಿದೆ. ಡಿಸೆಂಬರ್‌ವರೆಗೆ ಒಂದು ಲಕ್ಷ ಗುರಿ ಮುಟ್ಟುವ ವಿಶ್ವಾಸವಿದೆ. ಎಂದರು.ಆಗಸ್ಟ್-ಸೆಪ್ಟೆಂಬರ್‌ನನಲ್ಲಿ ಸಮಗ್ರ ಕಲ್ಯಾಣ ಕರ್ನಾಟಕದ 52 ತಾಲೂಕು ಕೇಂದ್ರಗಳಲ್ಲಿ ಜಿಲ್ಲಾ ವಿಭಾಗ ಮಟ್ಟದಲ್ಲಿ 18 ಪ್ರಕಾರದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಸಾಮಾಜಿಕ-ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ ಎಂದು ಬಸವರಾಜ ಪಾಟೀಲ್ ಸೇಡಂ ಮಾಹಿತಿ ನೀಡಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರು ಹಾಗೂ ದೇವಾಲಯದ ಸದಾಶಿವ ಸ್ವಾಮೀಜಿ ಮಾತನಾಡಿ, ಒಂಬತ್ತು ದಿನಗಳ ಭಾರತೀಯ ಸಂಸ್ಕೃತಿ ಉತ್ಸವದ ಯಶಸ್ಸಿಗಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಎಲ್ಲ ತಾಲೂಕುಗಳಲ್ಲಿ 45 ದಿನಗಳ ಪ್ರವಾಸ ಕೈಗೊಳ್ಳಲಾಗುತ್ತಿದೆ. ಇದೇ ಆ.22ರಿಂದ ಪ್ರವಾಸ ಆರಂಭಿಸಲಾಗುವುದು ಎಂದು ನುಡಿದರು.ವಿಕಾಸ ಅಕಾಡೆಮಿಯ ವಿಶ್ವಸ್ಥ ಮಂಡಳಿಯ ಮಾರ್ಥಂಡ ಶಾಸ್ತ್ರೀ, ಭಾರತ ವಿಕಾಸ ಸಂಗಮದ ಅಖಿಲ ಭಾರತ ಸಂಯೋಜಕ ಮಾಧವರೆಡ್ಡಿ ಇದ್ದರು.
21 ವರ್ಷಗಳ ಅಪೂರ್ವ ಯಾತ್ರೆ: ವಿಕಾಸ ಅಕಾಡೆಮಿ ಕಾರ್ಯಾರಂಭ ಮಾಡಿದ ಕಳೆದ 21 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಕರ್ಮಭೂಮಿ ಮಾಡಿಕೊಂಡು ಈವರೆಗೆ ಸುಮಾರು ರು.220 ಕೋಟಿಗೂ ಅಧಿಕ ಪ್ರಮಾಣದ ಜನಹಿತ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. 20 ಸಾವಿರ ಸಮಾರಂಭ, 2 ಸಾವಿರ ಪ್ರಶಿಕ್ಷಣ ವರ್ಗಗಳನ್ನು ನಡೆಸಲಾಗಿದೆ. ನಿಸರ್ಗ ಹಸಿರಾಗಲಿ ಎಂದು ದಶಕದಲ್ಲಿ 40 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ಗೋ ಸಂಪತ್ತಿನ ಸಂರಕ್ಷಣೆಗಾಗಿ 16 ದೇಶಿ ಗೋತಳಿ ಸಂರಕ್ಷಣೆಯ 100 ಕ್ಕೂ ಗೋಶಾಲೆಗಳಿಗೆ ಬೆಂಬಲಿಸಲಾಗಿದೆ. ಇಡೀ ದೇಶಕ್ಕೆ ಕಲ್ಯಾಣ ನಾಡಿನಿಂದಲೇ ಹೊಸ ತಿರುವು ನೀಡುವ ಸಂಕಲ್ಪವೇ ಭಾರತ ವಿರಾಟ್ ಸಾಂಸ್ಕೃತಿಕ ಉತ್ಸವದ ಹಿಂದಿನ ಪ್ರೇರಣೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಹೇಳಿದರು.