ಸಾರಾಂಶ
ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರು ಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿ ಬೋನ್ಹಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು
ಕನ್ನಡಪ್ರಭ ವಾರ್ತೆ ಸುರಪುರ
ಭಾರತೀಯ ಸಂಸ್ಕೃತಿಯನ್ನು ಜಾನಪದ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾಧ್ಯ. ಬದುಕು ಹಾಗೂ ಸಂಬಂಧ ಕಟ್ಟಲು ಜನಪದ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಲಕ್ಷ್ಮೀಪುರದ ಗೌರಿ ಸಂಸ್ಥಾನದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.ಇಲ್ಲಿನ ಮರಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುರು ಪುಟ್ಟರಾಜ ಜನ ಕಲ್ಯಾಣ ಸೇವಾ ಸಮಿತಿ ಬೋನ್ಹಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಲೆ, ನಾಟಕಗಳು ಮಾನವನ ಮಾನಸಿಕ ಒತ್ತಡ ಕಡಿಮೆ ಮಾಡಿ ಮನಸ್ಸಿಗೆ ಉಲ್ಲಾಸ, ಆನಂದ ತುಂಬುತ್ತದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಮಾಜಿಕವಾಗಿ ಒಗ್ಗಟ್ಟು ಪ್ರದರ್ಶಿಲು ಪೂರಕವಾಗಲಿದೆ ಎಂದರು.ಟಿವಿ, ಕಂಪ್ಯೂಟರ್, ಇಂಟರ್‌ನೆಟ್ ಯುಗದಲ್ಲಿ ಪೌರಾಣಿಕ ನಾಟಕ, ಜಾನಪದ ಕಲೆಗಳು ಮಾಯವಾಗುತ್ತಿದ್ದು, ನಮ್ಮ ಸಂಸ್ಕೃತಿಯ ಸೊಗಡನ್ನು ನಾವು ಕಾಪಾಡಿಕೊಂಡು ಹೋಗಬೇಕು. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಆಧುನಿಕತೆ ಭರಾಟೆ ನಡುವೆಯೂ ಜನಪದ ಹಳ್ಳಿಗರಿಂದಲೇ ಜೀವಂತವಾಗಿದೆ. ಆದಿಮಾನವ, ಬುಡಕಟ್ಟು ಸಮುದಾಯಗಳಿಂದ ತಲಾ ತಲಾಂತರದಿಂದ ಹರಿದು ಬಂದ ಜೀವನ ಅನುಭವದ ರಸಗಟ್ಟೇ ಜಾನಪದವಾಗಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ, ಜಾನಪದ ಸಾಹಿತ್ಯವು ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಶ್ರೀಮಂತವಾಗಿದೆ ಎಂದು ತಿಳಿಸಿದರು.
ಹಿರಿಯ ಕಲಾವಿದ ರಾಜಶೇಖರ ಗೆಜ್ಜೆ ಮಾತನಾಡಿ, ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದದ್ದು, ಅದರ ನಾಶ ಆಗೋದು ಅಷ್ಟೊಂದು ಸುಲಭವಲ್ಲ. ನಮ್ಮ ಸಮೂಹ ಎಲ್ಲರೂ ಜವಾಬ್ಧಾರಿ ವಹಿಸಿ ಜನಪದದ ಉಳಿವಿಗೆ ಶ್ರಮಿಸಬೇಕಿದೆ ಎಂದರು.ಸೋಬಾನ ಪದ, ಜಾನಪದ ಗೀತೆ, ಬೀಸುವ ಪದ, ಕುಟ್ಟುವ ಪದ, ಮಹಿಳಾ ಭಜನಾ ಪದ, ಭಕ್ತಿ ಗೀತೆಗಳು, ತಬಲಾ ಸೋಲ್, ತಮ್ಮಟೆ ವಾದ್ಯ, ಸಾಂಪ್ರದಾಯಿಕ ಹಾಡುಗಳು ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳು ನಡೆದವು.