ಭಾರತೀಯ ಸಂಸ್ಕೃತಿ-ಸಂಸ್ಕಾರ ವಿಶ್ವಕ್ಕೆ ಮಾದರಿ: ಸ್ವಾಮಿ ನಿರ್ಭಯಾನಂದ ಸರಸ್ವತಿ

| Published : Feb 28 2025, 12:49 AM IST

ಭಾರತೀಯ ಸಂಸ್ಕೃತಿ-ಸಂಸ್ಕಾರ ವಿಶ್ವಕ್ಕೆ ಮಾದರಿ: ಸ್ವಾಮಿ ನಿರ್ಭಯಾನಂದ ಸರಸ್ವತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವನ ಧ್ಯಾನದಿಂದ ಸಕಲವನ್ನೂ ಸಾಧ್ಯವಾಗಿಸಿಕೊಳ್ಳಬಹುದು. ಶಿವಸ್ತುತಿ, ಶಿವಭಜನೆ ಹಾಗೂ ಶಿವನ ಸ್ಮರಣೆಯಿಂದ ಬದುಕಲ್ಲಿ ನೆಮ್ಮದಿ ಪ್ರಾಪ್ತವಾಗಲಿದೆ.

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ಶಿವನ ಧ್ಯಾನದಿಂದ ಸಕಲವನ್ನೂ ಸಾಧ್ಯವಾಗಿಸಿಕೊಳ್ಳಬಹುದು. ಶಿವಸ್ತುತಿ, ಶಿವಭಜನೆ ಹಾಗೂ ಶಿವನ ಸ್ಮರಣೆಯಿಂದ ಬದುಕಲ್ಲಿ ನೆಮ್ಮದಿ ಪ್ರಾಪ್ತವಾಗಲಿದೆ ಎಂದು ವಿಜಯಪುರ ಮತ್ತು ಗದುಗಿನ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ನಗರದ ಅಮೃತೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಅಮೃತೇಶ್ವರ ದೇವಸ್ಥಾನ ಟ್ರಸ್ಟ್‌ ವತಿಯಿಂದ 20ನೇ ವರ್ಷದ ಮಹಾಶಿವರಾತ್ರಿ ಉತ್ಸವ ಅಂಗವಾಗಿ ಶಿವ ವಚನಾಮೃತ ಮತ್ತು ಸತ್ಯಾವತಾರ ಸ್ವರ ಸಂಚಾರ ಕಾರ್ಯಕ್ರಮವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಹಾಗೂ ಈ ದೇಶದ ಜನರ ಸಂಸ್ಕಾರ ವಿಶ್ವಕ್ಕೆ ಮಾದರಿಯಾಗಿದೆ. ವಿದೇಶದಲ್ಲಿರುವ ಲಕ್ಷಾಂತರ ಜನರು ಭಾರತೀಯ ಸಂಸ್ಕೃತಿಗೆ ಮೊರೆ ಹೋಗಿದ್ದಾರೆ. ಇಲ್ಲಿನ ವೇದ-ಉಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಭಾರತೀಯತೆಯನ್ನು ವಿದೇಶಿಯರು ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂದರು.

ಶಿವನು ಭಕ್ತಿಪ್ರಿಯನು. ಭಕ್ತಿಯಿಂದ ಪೂಜಿಸಿ, ಧ್ಯಾನಿಸಿದರೆ ಖಂಡಿತ ಒಲಿಯುತ್ತಾನೆ. ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಮೈಗೂಡಿಸಿ. ಈ ದೇಶದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಮೂಡಿಸಿ. ದೇಶದ-ನಾಡಿನ ಅನನ್ಯ ಪರಂಪರೆಯನ್ನು ಮಕ್ಕಳಿಗೆ ತಿಳಿಸಿಕೊಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಗುರುಬಸವ ಮಠದ ಶ್ರೀಬಸವಭೂಷಣಸ್ವಾಮಿ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ,ಶಾಸಕ ಬಿ.ಎಂ.ನಾಗರಾಜ, ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೌತಳ ಆರ್.ಸದಾಶಿವ, ವಿಶ್ವಜ್ಯೋತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಬಸವಲಿಂಗಪ್ಪ, ಸಮಾಜ ಸೇವಕ ಟಿ.ಧರಪ್ಪ ನಾಯಕ, ಶಿಕ್ಷಕರಾದ ಪಿ.ದಿವಾಕರ ನಾರಾಯಣ, ವೆಂಕಟೇಶ, ಚೆನ್ನಪ್ಪ ಉಪಸ್ಥಿತರಿದ್ದರು.

ರಾಮಚಂದ್ರ ಹಡಪದ ಮತ್ತು ತಂಡದವರು ಭಕ್ತಿಗೀತೆಗಳ ಗಾಯನ ಪ್ರಸ್ತುತಪಡಿಸಿದರು. ವಿವಿಧ ಮಕ್ಕಳು ಪ್ರದರ್ಶನ ನೀಡಿದ ಶಿವ ತಾಂಡವ ನೃತ್ಯ ಗಮನ ಸೆಳೆಯಿತು. ನೇಹ ರಂಗ ತಂಡದವರು ಡೊಳ್ಳುಕುಣಿತ ಪ್ರದರ್ಶನ ನೀಡಿದರು.