ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಕಾರ್ಯನಿರ್ವಹಿಸಲು ಸಮರ್ಥರಾಗಿದ್ದಾರೆ. ಅವರು ಅಡುಗೆ ಮನೆಗೆ ಸೀಮಿತರಾಗದೇ ಕ್ರಿಯಾಶೀಲ ಚಿಂತನೆಯೊಂದಿಗೆ ಸಮಾಜದ ಮುಂಚೂಣಿಗೆ ಬರಬೇಕು ಎಂದು ಕೊಪ್ಪ ತಾಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವಧೂತರಾದ ವಿನಯ ಗುರೂಜಿ ನುಡಿದರು.
ಪಟ್ಟಣದ ಸಂಸ್ಕೃತಿ ಮಂದಿರ ಆವರಣದಲ್ಲಿ ಮಲೆನಾಡು ಮಹಿಳಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಸಂಜೆ ಅಂತರ ರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ನಡೆದ ಒಂದು ದಿನದ ರಾಜ್ಯಮಟ್ಟದ ಆಹ್ವಾನಿತ ಮಹಿಳಾ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಹಾಗೂ ಸಾಧಕರ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.ರಾಸಾಯನಿಕ ಮಿಶ್ರಣದ ಆಹಾರ ಸೇವನೆಯಿಂದಾಗಿ ಈಚಿನ ವರ್ಷಗಳಲ್ಲಿ ಹೆಣ್ಣುಮಕ್ಕಳು ಸಣ್ಣಪ್ರಾಯದಲ್ಲೇ ಋತುಮತಿ ಆಗುತ್ತಿರುವುದು ಮತ್ತು ಆರೋಗ್ಯದಲ್ಲಿ ಏರುಪೇರು ಕಾಣುತ್ತಿದ್ದೇವೆ. ಅನಿರೀಕ್ಷಿತವಾದ ಈ ಬದಲಾವಣೆ ಆತಂಕದ ಬೆಳವಣಿಗೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ. ಆರೋಗ್ಯದ ದೃಷ್ಟಿಯಿಂದ ಭಾರತೀಯ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ರಾಸಾಯನಿಕ ಮಿಶ್ರಣದ ಆಹಾರ ಸೇವನೆಯಿಂದಾಗಿ ಈ ಬದಲಾವಣೆಯನ್ನು ಗಮನಿಸಬೇಕಾಗಿದೆ. ಆಹಾರ ಕ್ರಮದ ಬಗ್ಗೆ ತಾಯಂದಿರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಅತಿಯಾದ ಬ್ರಾಯ್ಲರ್ ಚಿಕನ್ ಸೇರಿದಂತೆ ರಾಸಾಯಣ ಮಿಶ್ರಿತ ಆಹಾರ ಬಳಕೆ ನಿಯಂತ್ರಣ ಮಾಡಬೇಕು. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುವ ಭಾರತೀಯ ಆಹಾರ ಕ್ರಮವನ್ನು ಅನುಸರಿಸಬೇಕಿದೆ. ಇದರ ಆದಾಯವೂ ನಮ್ಮ ಅನ್ನದಾತರಿಗೆ ಸಲ್ಲುವಂತಾಗಬೇಕು. ಕಾಣಿಕೆ ಹುಂಡಿಗೆ ಹಣ ಹಾಕುವ ಬದಲಿಗೆ ಮಕ್ಕಳ ಶಿಕ್ಷಣ ಮುಂತಾದ ಸಾರ್ವಜನಿಕ ಸೇವಾ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ ಮಾನವ ಧರ್ಮವನ್ನು ಪಾಲಿಸೋಣ ಎಂದು ಹೇಳಿದರು.ಟ್ರಸ್ಟ್ ಕಾರ್ಯ ಪ್ರಶಂಸನೀಯ:
ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಹೆಣ್ಣು ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರದಲ್ಲೂ ತನ್ನ ಸಾಮರ್ಥ್ಯ ಮೆರೆಯುತ್ತಿದ್ದಾಳೆ. ಇದಕ್ಕೆ ಕುಟುಂಬದ ಸದಸ್ಯರ ಪೂರ್ಣ ನೆರವು ಅಗತ್ಯ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಇಲ್ಲಿನ ಮಲೆನಾಡು ಮಹಿಳಾ ಟ್ರಸ್ಟಿನ ಕಾರ್ಯ ಪ್ರಶಂಸನೀಯ ಎಂದರು.ಮಲೆನಾಡು ಮಹಿಳಾ ಟ್ರಸ್ಟಿನ ಅಧ್ಯಕ್ಷೆ ನಯನಾ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಸಿರಿಬೈಲ್ ಧರ್ಮೆಶ್, ಡಿವೈಎಸ್‍ಪಿ ಗಜಾನನ ಸುತಾರ್, ಸೊಪ್ಪುಗುಡ್ಡೆ ರಾಘವೇಂದ್ರ, ಎಂ.ಜಿ. ಮಣಿ ಹೆಗ್ಡೆ, ಮಾಸ್ತಿಕಟ್ಟೆ ಸುಬ್ರಮಣ್ಯ, ಅಮರನಾಥ ಶೆಟ್ಟಿ ಇದ್ದರು. ಶೃತಿ ಆದರ್ಶ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾವಳಿಯ ಫಲಿತಾಂಶ:ಪ್ರಥಮ: ಆಳ್ವಾಸ್ ತಂಡ ಮೂಡಬಿದಿರೆ, ದ್ವಿತೀಯ: ಮೈಸೂರಿನ ಹ್ಯಾಪಿ ಗರ್ಲ್ಸ್, ತೃತೀಯ: ರವಿ ಅಕಾಡೆಮಿ ಮೈಸೂರು ಹಾಗೂ ಚತುರ್ಥ ಸ್ಥಾನ: ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ತೀರ್ಥಹಳ್ಳಿ. ಪಂದ್ಯಾವಳಿಯಲ್ಲಿ ಆಹ್ವಾನಿತ 8 ತಂಡಗಳು ಪಾಲ್ಗೊಂಡಿದ್ದವು.
- - -ಕೋಟ್ ಆರೋಗ್ಯ ಮತ್ತು ಆನಂದಕ್ಕೆ ಕ್ರೀಡೆ ಅತಿ ಮುಖ್ಯ ಮಾಧ್ಯಮವಾಗಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ತೀರ್ಥಹಳ್ಳಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮ ಪ್ರಶಂಸನೀಯ
- ವಿನಯ ಗುರೂಜಿ, ಗೌರಿಗದ್ದೆ ಆಶ್ರಮ- - - -10ಟಿಟಿಎಚ್01:
ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ಕೊಪ್ಪ ತಾಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವಧೂತರಾದ ಗೌರಿಗದ್ದೆ ಆಶ್ರಮದ ವಿನಯ ಗುರೂಜಿ ಉದ್ಘಾಟಿಸಿದರು. ನಯನಾ ಶೆಟ್ಟಿ, ಗೀತಾ ರಮೇಶ್, ಸಿರಿಬೈಲ್ ಧರ್ಮೆಶ್, ಗಜಾನನ ಸುತಾರ್, ಮಾಸ್ತಿಕಟ್ಟೆ ಸುಬ್ರಮಣ್ಯ, ಅಮರನಾಥ ಶೆಟ್ಟಿ ಇದ್ದರು.