ಸಾರಾಂಶ
ಕನ್ನಡಪ್ರಭವಾರ್ತೆ ಮೂಲ್ಕಿ
ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೆ ಅತೀ ಹೆಚ್ಚು ಶಾಖೆ ಹೊಂದಿದ್ದು ಕಳೆದ 170 ಕ್ಕೂ ಹೆಚ್ಚು ವರ್ಷದಿಂದ ಉತ್ತಮ ಸೇವೆ ನೀಡುತ್ತ ಬಂದಿದ್ದು ಇದೀಗ ಹೊಸ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಜನರಿಗೆ ಹತ್ತಿರ ವಾಗುತ್ತಿದೆ ಎಂದು ಅಂಚೆ ಇಲಾಖೆಯ ಕರ್ನಾಟಕ ವೃತ್ತ ದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಂ .ರಾಜೇಂದ್ರ ಕುಮಾರ್ ಹೇಳಿದರು.ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಂಗಳೂರು ಅಂಚೆ ಇಲಾಖೆ ಮಂಗಳೂರು ವಿಭಾಗ, ಕಿನ್ನಿಗೋಳಿ ಯುಗಪುರುಷ , ಕಿನ್ನಿಗೋಳಿಯ ಲಯನ್ಸ್ ಕ್ಲಬ್ , ಲಿಯೋ ಕ್ಲಬ್ , ರೋಟರಿ ಕ್ಲಬ್ , ಭ್ರಾಮರೀ ಮಹಿಳಾ ಸಮಾಜ, ಮೂಲ್ಕಿ ತಾಲೂಕು ಪತ್ರಕರ್ತರ ಸಂಘ, ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಆಶ್ರಯದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಲಾಖೆ ಹೊಸ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸುವ ಜೊತೆಗೆ ಗ್ರಾಮೀಣ ಜನರಿಗೆ ವರದಾನ ವಾಗುವ ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಹೆಣ್ಣು ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನ ಮಂತ್ರಿ ವಿಮಾ ಯೋಜನೆಗಳು ಉತ್ತಮ ಕೆಲಸ ಮಾಡುತ್ತಿದೆ. ಅಂಚೆ ನೌಕರರು ಇನ್ನಷ್ಟು ಯೋಜನೆಗಳನ್ನು ಜನರಿಗೆ ಪರಿಚಯಿಸಿ ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಬೇಕು. ಕೇಂದ್ರ ಸರ್ಕಾರ ಬಜಟ್‌ನಲ್ಲಿ ಘೋಷಣೆ ಮಾಡಲಾಗಿರುವ ಮನೆ ಮನೆಗೆ ಸೋಲಾರ್ ಸಿಸ್ಟಮ್ ನೋಂದಣಿ ಪ್ರಕ್ರಿಯೆಯು ಅಂಚೆ ಕಚೇರಿಯ ಮೂಲಕ ನಡೆಯಲಿದೆ.ಹಳೆಯ ಅಂಚೆ ಖಾತೆಗಳಿಗೆ ನಾಮನಿರ್ದೇಶನ ಹಾಗೂ ಮೊಬೈಲ್ ಪಾನ್ ಕಾರ್ಡ್ ಜೋಡಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಮಂಗಳೂರು ವಲಯದ ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ ಮಲ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖೆಯು ಕಳೆದ ಕೆಲವು ವರ್ಷದಿಂದ ಸರ್ಕಾರದ ಹೊಸ ಜನ ಪರ ಯೋಜನೆಗಳನ್ನು ಗ್ರಾಹಕರಿಗೆ ಮುಟ್ಟಿಸುವಲ್ಲಿ ಉತ್ಸುಕರಾಗಿದ್ದು ಸಿಬ್ಬಂದಿ ಶ್ರಮ ಪಡುತ್ತಿದ್ದಾರೆ ಎಂದು ಹೇಳಿದರು.ಕಿನ್ನಿಗೋಳಿ ಯುಗಪುರಷದ ಭುವನಾಭಿರಾಮ ಉಡುಪ, ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷೆ ಹಿಲ್ದಾ ಡಿಸೋಜ, ರೋಟರಿ ಅಧ್ಯಕ್ಷ ತ್ಯಾಗರಾಜ ಆಚಾರ್ಯ, ಇನ್ನರ್‌ವೀಲ್ ಅಧ್ಯಕ್ಷೆ ಸವಿತಾ ಶೆಟ್ಟಿ, ಭ್ರಾಮರೀ ಮಹಿಳಾ ಸಮಾಜದ ಅನುಷ ಕರ್ಕೇರಾ, ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ, ಟೈಲರ‍್ಸ್ ಸಂಸ್ಥೆಯ ಶಂಕರ ಕೋಟ್ಯಾನ್ , ಉಪ ಅಂಚೆ ಅಧೀಕ್ಷಕ ದಿನೇಶ್ ಪಿ, ಕಿನ್ನಿಗೋಳಿ ಅಂಚೆ ಕಚೇರಿಯ ಅಂಚೆ ಪಾಲಕ ಶ್ರೀಧರ್, ಐಕಳ ಅಂಚೆ ಕಚೇರಿಯ ತಿಲಕ್ , ಮುಂಡ್ಕೂರು ಅಂಚೆ ಕಚೇರಿಯ ಚಿತ್ರಾಕ್ಷಿ , ಶೋಭಾ ರಾಜೇಶ್ , ಅವಿನಾಶ್ ರಾವ್, ಬಿ. ರಾಮಚಂದ್ರಕಾಮತ್, ಶಿವದಾಸ್ , ರವೀಂದ್ರ ಕುಮಾರ್, ಧನಂಜಯ ಐಗಳ್ , ವೆಂಕಟೇಶ್ ಪೈ, ಶಕುಂತಳಾ ಶೆಟ್ಟಿ, ವಿನಯರಾಜ್ , ಧನ್ಯ, ಹರ್ಷೀತಾ ಮತ್ತಿತರರು ಉಪಸ್ಥಿತರಿದ್ದರು.
ಮಾರುಕಟ್ಟೆ ವಿಭಾಗದ ಸುಭಾಶ್ ಸಾಲ್ಯಾನ್ ಯೋಜನೆಯ ವಿವರ ತಿಳಿಸಿದರು. ಸಹಾಯಕ ಅಂಚೆ ಅಧೀಕ್ಷಕ ಹರೀಶ್ ವಂದಿಸಿದರು.