ಸಾರಾಂಶ
- ಮನರಂಜನಾ ಕೂಟ ರಾಜ್ಯೋತ್ಸವದಲ್ಲಿ ಡಾ.ಮಂಜುನಾಥ ಅಭಿಮತ - - -ಕನ್ನಡಪ್ರಭ ವಾರ್ತೆ ದಾವಣಗೆರೆ ವಿಶ್ವದ ಅತಿ ದೊಡ್ಡ ಸೇವಾ ಜಾಲಗಳ ಪೈಕಿ ಅಂಚೆ ಸೇವೆಯೂ ಒಂದಾಗಿದೆ. ದೇಶದಲ್ಲಿ ಅಂಚೆ ಕಚೇರಿಗಳ ಸಿಬ್ಬಂದಿ ಪ್ರತಿನಿತ್ಯ ಕೋಟ್ಯಂತರ ಮಂದಿಗೆ ಅಂಚೆ ಸೇವೆ ಒದಗಿಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.
ಶುಕ್ರವಾರ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಪ್ರಧಾನ ಅಂಚೆ ಕಚೇರಿಯ ಮನರಂಜನಾ ಕೂಟ ಹಾಗೂ ವಿಭಾಗೀಯ ಕಚೇರಿ ವತಿಯಿಂದ ಏರ್ಪಾಡಾಗಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಂಚೆ ಸೇವೆಗೆ ಕೋರಿಯರ್ ಮುಂತಾದ ಏನೇ ಪರ್ಯಾಯ ವ್ಯವಸ್ಥೆಗಳು ಬಂದರೂ ಭಾರತೀಯ ಅಂಚೆ ಇಲಾಖೆ ಪ್ರಾಮುಖ್ಯತೆಗೆ ಮಾತ್ರ ಇಂದಿಗೂ ಕುಂದುಬಂದಿಲ್ಲ. ಕೇವಲ ಅಂಚೆ ಸೇವೆ ಒಂದೇ ಅಲ್ಲದೇ ಸಮಾಜಮುಖಿ, ಜನಪರವಾದ ಅನೇಕ ಸೇವಾ ಸೌಲಭ್ಯಗಳಿಂದಾಗಿ ಭಾರತೀಯ ಅಂಚೆಯು ಅನಿವಾರ್ಯ, ಅವಶ್ಯಕವೂ ಆಗಿ, ತನ್ನ ಜನಪ್ರಿಯತೆ ಹಾಗೂ ವಿಶ್ವಾಸಾರ್ಹತೆ ಇಂದಿಗೂ ಉಳಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಭಾಷೆ ಕೇವಲ ಅಭಿವ್ಯಕ್ತಿ ಮಾಧ್ಯಮ, ಸಂವಹನ ಸಾಧನ ಅಷ್ಟೇ ಅಲ್ಲ, ಆ ಭಾಷಿಗರ ಸಂಸ್ಕೃತಿಯೂ ಅದರಲ್ಲಿ ಬಿಂಬಿತವಾಗುತ್ತದೆ. ಭಾಷೆ ಉಳಿದರೆ ಸಂಸ್ಕೃತಿಯೂ ಉಳಿದಂತೆ, ಆದರೆ ಈಗೀಗ ಹಳ್ಳಿ ಪಟ್ಟಣ ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ತಿನ್ನುವ ಅನ್ನಕ್ಕೆ ಅನ್ನ ಎನ್ನದೇ ರೈಸ್ ಎನ್ನುತ್ತಿರುವುದು ವಿಪರ್ಯಾಸ. ದಿನನಿತ್ಯದ ನಮ್ಮ ಭಾಷಾ ಬಳಕೆಯಲ್ಲಿ ಅನವಶ್ಯಕ ಅನ್ಯಭಾಷಾ ಪದಗಳನ್ನು ನಾವೆಷ್ಟು ಬಳಸುತ್ತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ತಾವಾಗಿಯೇ ವಿಮರ್ಶಿಸಿಕೊಳ್ಳಬೇಕು, ಸರಿಪಡಿಸಿಕೊಳ್ಳಬೇಕು. ಇದರಿಂದ ನಮ್ಮ ಕನ್ನಡ ಭಾಷೆ ಖಂಡಿತ ಉಳಿಯುತ್ತದೆ ಎಂದರು.ಅಂಚೆ ಅಧೀಕ್ಷಕ ಚಂದ್ರಶೇಖರ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈವಿಧ್ಯಮಯ ಪ್ರಯೋಗ ನಮ್ಮ ಕನ್ನಡ ಭಾಷೆಗೆ ಇದೆ. ಕನ್ನಡ ಧ್ವಜವು ಹಳದಿ ಮತ್ತು ಕೆಂಪು ವರ್ಣಗಳ ಅರ್ಥವತ್ತಾದ ಸಂಕೇತ ಹೊಂದಿದೆ ಎಂದರು.
ಪ್ರಧಾನ ಅಂಚೆಪಾಲಕ ಎಂ.ಓಂಕಾರ ಮೂರ್ತಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಜೆ.ಎಸ್. ಗುರುಪ್ರಸಾದ್, ಕೆ.ಎಂ. ನರೇಂದ್ರ ನಾಯ್ಕ, ಅಂಚೆ ನಿರೀಕ್ಷಕ ಅರಳು ಮಲ್ಲಿಗೆ ನಾಗರಾಜ ರಾವ್, ವೆಂಕಟರಾಮಯ್ಯ, ಸೋಮಣ್ಣ ಮಾಯಾಚಾರ್ ಇತರರು ಇದ್ದರು.ಜೆ.ಎಸ್. ಗುರುಪ್ರಸಾದ ಪ್ರಾರ್ಥಿಸಿ, ಮಹಿಳಾ ಸಿಬ್ಬಂದಿ ನಾಡಗೀತೆ ಹಾಡಿದರು. ಯಾಸ್ಮಿನ್ ಬಾನು ಸ್ವಾಗತಿಸಿ, ದಿನೇಶ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ ನಾಯ್ಕ ವಂದಿಸಿದರು. ಕೆ.ಪಿ.ಮಮತಾ ಅತಿಥಿಗಳ ಪರಿಚಯಿಸಿದರು. ಹಿರಿಯೂರಿನ ದಿವೂ ಶಂಕರ್ ಅಣಕು ಪ್ರದರ್ಶನ, ಶ್ರೀನಿವಾಸ್ ಮಾಯಕೊಂಡ ಮುಂತಾದವರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
- - - -15ಕೆಡಿವಿಜಿ37:ದಾವಣಗೆರೆಯ ಅಂಚೆ ಇಲಾಖೆಯಿಂದ ನಡೆದ ಮನರಂಜನಾ ಕೂಟ, ರಾಜ್ಯೋತ್ಸವ ಕಾರ್ಯಕ್ರಮವನ್ನು ಅಂಚೆ ಅಧೀಕ್ಷಕ ಚಂದ್ರಶೇಖರ ಹೊಳ್ಳ ಉದ್ಘಾಟಿಸಿದರು.