ಸಾರಾಂಶ
ಕೊಡಗು ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಜಿನೇವಾ ಒಪ್ಪಂದದ ದಿನಾಚರಣೆಯನ್ನು ಮಡಿಕೇರಿಯಲ್ಲಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಜಿನೇವಾ ಒಪ್ಪಂದದ ದಿನಾಚರಣೆಯನ್ನು ಮಡಿಕೇರಿಯಲ್ಲಿ ಆಚರಿಸಲಾಯಿತು.ನಗರದ ರೆಡ್ ಕ್ರಾಸ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ ಅವರು ಜಿನೇವಾ ಒಪ್ಪಂದದ ಮಹತ್ವವನ್ನು ಸಭೆಗೆ ತಿಳಿಸಿದರು.ಜಿನೇವಾ ಒಪ್ಪಂದಗಳ ದಿನವನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಇದು ಸಶಸ್ತ್ರ ಸಂಘರ್ಷಗಳ ಸಮಯದಲ್ಲಿ ಮಾನವೀಯ ಕಾನೂನುಗಳನ್ನು ಪಾಲಿಸುವ ಮಹತ್ವವನ್ನು ನೆನಪಿಸುತ್ತದೆ. ಯುದ್ಧದ ಸಮಯದಲ್ಲಿ ಗಾಯಗೊಂಡವರು ಮತ್ತು ಸೆರೆಯಾಳುಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾನೂನು ಮಾನದಂಡಗಳನ್ನು ಜಿನೇವಾ ಒಪ್ಪಂದ ಪ್ರತಿಪಾದಿಸುತ್ತದೆ. ಸಂಘರ್ಷದ ಸಮಯದಲ್ಲಿ ಮಾನವೀಯತೆಯನ್ನು ಕಾಪಾಡುವಲ್ಲಿ ಮತ್ತು ರಕ್ಷಿಸುವಲ್ಲಿ ಈ ಒಪ್ಪಂದಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು.ಜಿಲ್ಲೆಯ ಪ್ರೌಢ ಶಾಲೆಯಲ್ಲಿ ಕಿರಿಯ ರೆಡ್ ಕ್ರಾಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳನ್ನು ಮರು ಸ್ಥಾಪನೆ ಮಾಡಲಾಗುವುದು. ಕೊಡಗು ರೆಡ್ ಕ್ರಾಸ್ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಬಿ.ಕೆ.ರವೀಂದ್ರ ರೈ ತಿಳಿಸಿದರು.ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಖಜಾಂಚಿ ಪ್ರಸಾದ್ ಗೌಡ, ವ್ಯವಸ್ಥಾಪಕ ಸಮಿತಿ ಸದಸ್ಯರಾದ ಸತೀಶ್ ಎಸ್.ಕೆ., ಉತ್ತಯ್ಯ ಕೆ.ಟಿ, ಸತೀಶ್ ರೈ, ತೆನ್ನಿರ ಮೈನಾ ಹಾಗೂ ವಸಂತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಧನಂಜಯ ಎಂ. ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಟಾರ್ಪಲ್ ಗಳನ್ನು ವಿತರಿಸಲಾಯಿತು.