ಸಾರಾಂಶ
ಸೇವಾದಳ ಶತಮಾನೋತ್ಸವದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿಕೆ । ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ
ಕನ್ನಡಪ್ರಭ ವಾರ್ತೆ ಚಾಮರಾಜನಗರವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ, ಸಹೋದರತೆ ಹಾಗೂ ಭಾವೈಕ್ಯತೆಯ ಜಾಗೃತಿ ಮೂಡಿಸುವ ಭಾರತ ಸೇವಾದಳ ಸಂಸ್ಥೆಯು ದೇಶದ ಸ್ವಾತಂತ್ರ್ಯ ಚಳವಳಿಗೆ ಅಪಾರವಾದ ಕೊಡುಗೆ ನೀಡಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಆಭಿಪ್ರಾಯಪಟ್ಟರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸೇವಾದಳ ಶತಮಾನೋತ್ಸವದ ಅಂಗವಾಗಿ ಭಾರತ ಸೇವಾದಳ ಜಿಲ್ಲಾ ಸಮಿತಿಯು ಆಯೋಜಿಸಿದ್ದ ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾರತ ಸೇವಾದಳ ಸಂಸ್ಥೆಯನ್ನು ಕಟ್ಟಿದ ಸ್ವಾತಂತ್ರ್ಯ ಹೋರಾಟಗಾರ ಡಾ. ನಾ.ಸು. ಹರ್ಡೀಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಸೇವಾದಳವು ಶಿಸ್ತಿನ ಸಂಸ್ಥೆಯಾಗಿದ್ದು, ಹಿಂದುಸ್ತಾನ ಸೇವಾದಳ ಹೆಸರಿನಿಂದ 1923ರಲ್ಲಿ ಆರಂಭವಾದ ಸಂಸ್ಥೆಯು 1950ರ ಮಾರ್ಚ್ 16 ರಂದು ಭಾರತ ಸೇವಾದಳವಾಗಿ ಪುನರ್ ನಾಮಕರಣಗೊಂಡು ಇದೀಗ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ನಾ.ಸು. ಹರ್ಡೀಕರ್ ಅವರು ಹೋರಾಟಗಾರರಲ್ಲಿ ಸಂಘಟನೆ ಹಾಗೂ ದೇಶಪ್ರೇಮದ ಜಾಗೃತಿ ಮೂಡಿಸಲು ಸ್ವತಹ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿ ಇತರರಿಗೂ ಮಾದರಿಯಾಗಿದ್ದರು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಅನುದಾನಿತ ಸಂಸ್ಥೆಯಾಗಿರುವ ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ರಾಷ್ಟ್ರರಕ್ಷಣೆಯ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಭವಿಷ್ಯದ ಸತ್ಪçಜೆಗಳನ್ನು ರೂಪಿಸಲು ಭಾರತ ಸೇವಾದಳವು ಅವಿರತವಾಗಿ ಶ್ರಮಿಸುತ್ತಿದೆ ಸದೃಢ ಭಾರತ ಕಟ್ಟಲು ಭಾರತ ಸೇವಾದಳ ನೆರವಾಗಲಿದೆ ಎಂದು ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಸ್ತು ಕಲಿಸಲು ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ, ಎನ್.ಎಸ್.ಎಸ್ ಘಟಕಗಳನ್ನು ತೆರೆಯಲಾಗಿದೆ. ಸೇವಾದಳ ಸೇರಲು ವಿದ್ಯಾರ್ಥಿಗಳು ದೈಹಿಕ ಹಾಗೂ ಭೌತಿಕವಾಗಿ ಸದೃಢರಾಗಿ ಮಾನಸಿಕ ಸ್ವಾಸ್ಥ್ಯದಿಂದ ಕೂಡಿರಬೇಕು. ರಾಷ್ಟ್ರಧ್ವಜವನ್ನು ಗೌರವಿಸಬೇಕು. ಸಹೋದರತೆ, ಭಾವೈಕ್ಯತೆ, ನಾಯಕತ್ವ ಗುಣ, ಸಮಾನತೆ, ಸರಳತೆ, ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಪ್ರಸನ್ನ ಹಾಗೂ ಭಾರತ ಸೇವಾದಳದ ಜಿಲ್ಲಾ ಶಾಖೆಯ ಉಪಾಧ್ಯಕ್ಷ ನಾಗರಾಜು ಕೊಂಗರಹಳ್ಳಿ ಅವರು ಭಾರತ ಸೇವಾದಳದ ಉದ್ದೇಶ, ಆಶಯಗಳ ಬಗ್ಗೆ ಮಾತನಾಡಿದರು.ಜಿಲ್ಲಾ ಸಮಿತಿ ಸಂಘಟಕರಾದ ಈ. ಅರುಣ್ ಅವರು ಸೇವಾದಳ ನಡೆದು ಬಂದ ಹಾದಿ, ಸೇವಾದಳದ ಆಶೋತ್ತರಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ಜಿಲ್ಲಾ ಸಮಿತಿ ಅಧ್ಯಕ್ಷರಾದ ವೆಂಕಟನಾಗಪ್ಪಶೆಟ್ಟಿ ಅವರು ಮಾತನಾಡಿ, ಸೇವೆಗಾಗಿ ಬಾಳು ಘೋಷಣೆ ಹೊಂದಿರುವ ಭಾರತ ಸೇವಾದಳದ ಧ್ಯೇಯೋದ್ದೇಶಗಳು ಸಾರ್ಥಕಗೊಳ್ಳಲು ಹೆಚ್ಚಿನ ಮಕ್ಕಳು ಸೇವಾದಳ ಸೇರಬೇಕು. ಆ ಮೂಲಕ ಸಾಮಾಜಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು. ಸೇವಾದಳ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸಲು ಜಿಲ್ಲಾ ಸಮಿತಿ ಸಿದ್ಧವಿದೆ ಎಂದರು.ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ಎಂ.ಬಿ. ಲಿಂಗರಾಜು, ಜಿಲ್ಲಾ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಮಹೇಶ್ ಜಿ. ಬಳಿಗಾರ್, ಕೋಶಾಧ್ಯಕ್ಷ ವಿ. ಶ್ರೀನಿವಾಸಪ್ರಸಾದ್, ತಾಲೂಕು ಘಟಕದ ಆಧ್ಯಕ್ಷರಾದ ಸಿ.ಎಂ. ನರಸಿಂಹಮೂರ್ತಿ, ಜಿಲ್ಲಾ ಸಮಿತಿ ಕಾರ್ಯದರ್ಶಿ ವಿ. ಮಹದೇವಯ್ಯ, ಎಲ್ಲಾ ತಾಲೂಕುಗಳ ಘಟಕಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಅವರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಅವರು ಭಾರತ ಸೇವಾದಳದ ಪ್ರಭಾತ್‌ಬೇರಿಗೆ ಹಸಿರು ನಿಶಾನೆ ತೋರಿದರು.ಪ್ರಭಾತ್‌ಬೇರಿಯು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮೂಲಕ ಸಾಗಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅಂತ್ಯಗೊಂಡಿತು. ಪ್ರಭಾತ್‌ಬೇರಿಯಲ್ಲಿ ವಿವಿಧ ಶಾಲೆಗಳ ಸೇವಾದಳದ ವಿದ್ಯಾರ್ಥಿಗಳು ಪಾಲ್ಗೊಂಡು ಭಾರತ ಸೇವಾದಳದ ಘೋಷಣೆಗಳನ್ನು ಉಚ್ಚರಿಸುವ ಮೂಲಕ ಗಮನ ಸೆಳೆದರು.
ಜಿಲ್ಲಾಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿ, ಸ್ವಾತಂತ್ರ್ಯ ಹೋರಾಟಗಾರ ಡಾ. ನಾ.ಸು. ಹರ್ಡೀಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.