ಭಾರತೀಯ ಮಾನದಂಡ ಬಳಕೆ ಕಾರ್ಯಾಗಾರ

| Published : Dec 21 2024, 01:15 AM IST

ಸಾರಾಂಶ

ಕೇಂದ್ರ ಸರ್ಕಾರವು 723 ಉತ್ಪನ್ನಗಳಿಗೆ ಬಿಐಎಸ್‌ ಕಡ್ಡಾಯ ಗುಣಮಟ್ಟ ಪ್ರಮಾಣೀಕರಣ ಅಗತ್ಯವಿದೆ ಎಂದು ಘೋಷಿಸಿದೆ.

ಹೂವಿನಹಡಗಲಿ: ಇಲ್ಲಿನ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾರತೀಯ ಮಾನದಂಡಗಳ ಬಳಕೆಯ ಕುರಿತು ಭಾರತೀಯ ಮಾನದಂಡ ಬ್ಯೂರೋ ಬೆಂಗಳೂರು ಶಾಖೆಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಭಾರತೀಯ ಮಾನದಂಡ ಬ್ಯೂರೋ ಸಂಪನ್ಮೂಲ ವ್ಯಕ್ತಿ ಬಿ.ಮಧುಸೂದನ್ ತರಬೇತಿ ನೀಡಿ ಮಾತನಾಡಿ, ಭಾರತೀಯ ಮಾನದಂಡೀಕರಣವು ಪ್ರಸ್ತುತ ಉತ್ಪನ್ನಗಳ ಗುಣಮಟ್ಟವನ್ನು ಮಾನದಂಡಗೊಳಿಸುತ್ತಿದೆ, ಉತ್ಪನ್ನಗಳಿಗೆ ಐಎಸ್‌ಐ ಹಾಗೂ ಐಎಸ್‌ಒ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಪ್ರಯೋಗಾಲಯದಲ್ಲಿ ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸುತ್ತಿದೆ, ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಪ್ರಮಾಣ ಪತ್ರ, ಚಿನ್ನದ ಶುದ್ಧತೆಯನ್ನು ಖಚಿತಪಡಿಸುತ್ತಿದೆ, ವಿದೇಶಿ ಉತ್ಪನ್ನಗಳಿಗೆ ಪ್ರಮಾಣಪತ್ರ ನೀಡುತ್ತಿದೆ ಎಂದರು.

ಸೇವಾ ವಿತರಣಾ, ಎಲೆಕ್ಟ್ರಾನಿಕ್ ಮತ್ತು ತಾಂತ್ರಿಕ ಸಾಧನಗಳಿಗಾಗಿ ಬಿಐಎಸ್‌ ಪ್ರಮಾಣೀಕರಣಗಳೊಂದಿಗೆ ಬಿಐಎಸ್‌ ಕೇರ್ ಕಾರ್ಯಾಚರಣೆಯ ಕುರಿತು ತರಬೇತಿ ನೀಡಿದರು.

ಗ್ರಾಪಂ ಮಟ್ಟದಲ್ಲಿ ಸರಕುಗಳನ್ನು ಖರೀದಿಸುವಾಗ, ಸರ್ಕಾರದ ಇ-ಮಾರ್ಕೆಟ್‌ನಲ್ಲಿ ಐಎಸ್‌ಐ ಗುಣಮಟ್ಟದ ಪ್ರಮಾಣಪತ್ರ ಮತ್ತು ಕಡ್ಡಾಯ ಪ್ರಮಾಣಪತ್ರ ಹೊಂದಿರುವ ಕುರಿತು ಪರಿಶೀಲಿಸಬೇಕೆಂದು ಹೇಳಿದರು.

ಪ್ರಸ್ತುತ, ಕೇಂದ್ರ ಸರ್ಕಾರವು 723 ಉತ್ಪನ್ನಗಳಿಗೆ ಬಿಐಎಸ್‌ ಕಡ್ಡಾಯ ಗುಣಮಟ್ಟ ಪ್ರಮಾಣೀಕರಣ ಅಗತ್ಯವಿದೆ ಎಂದು ಘೋಷಿಸಿದೆ. ಗೃಹ ಉಪಯೋಗಿ ಗ್ಯಾಸ್ ಸಿಲಿಂಡರ್, ಹೆಲ್ಮೆಟ್, ಸಿಮೆಂಟ್, ಕುಕ್ಕರ್, ಕ್ರೀಡಾ ಆಟಿಕೆಗಳು, ಚಪ್ಪಲಿಗಳು, ವಾಹನ ಟೈರ್‌ಗಳು, ಹಾಲಿನ ಪುಡಿ ಇತ್ಯಾದಿಗಳಿಗೆ ಕಡ್ಡಾಯ ಪ್ರಮಾಣೀಕರಣ ಘೋಷಿಸಲಾಗಿದೆ ಎಂದರು. ಬಿಐಎಸ್‌ ಕೇರ್ ಎಪಿಪಿ ಪ್ರಕ್ರಿಯೆಯ ಸಹಾಯದಿಂದ ದೋಷಪೂರಿತ ಸರಕುಗಳ ಬಗ್ಗೆ ದೂರುಗಳನ್ನು ಸುಲಭವಾಗಿ ನೋಂದಾಯಿಸುವ ಬಗ್ಗೆ ತರಬೇತಿಯನ್ನು ನೀಡಿದರು.

ಬಿಐಎಸ್‌ನ ಅಧಿಕಾರಿ ಶಿವಕುಮಾರ, ತಾಲೂಕಿನ 26 ಗ್ರಾಪಂಗಳ ಅಧ್ಯಕ್ಷರು, ಪಿಡಿಒ, ತಾಪಂ ಸಿಬ್ಬಂದಿ ಉಪಸ್ಥಿತರಿದ್ದರು.