ಭಾರತೀಯ ಚಿಂತನೆಯಲ್ಲಿ ವಿಶ್ವವನ್ನೇ ಗೆಲ್ಲುವ ಶಕ್ತಿ ಇದೆ: ನಿರ್ಭಯಾನಂದ ಶ್ರೀ

| Published : Jan 13 2025, 12:45 AM IST

ಭಾರತೀಯ ಚಿಂತನೆಯಲ್ಲಿ ವಿಶ್ವವನ್ನೇ ಗೆಲ್ಲುವ ಶಕ್ತಿ ಇದೆ: ನಿರ್ಭಯಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಚಿಂತನೆ ವಿಶ್ವಕ್ಕೆ ತಲುಪದಿದ್ದರೆ ಇಡೀ ವಿಶ್ವವೇ ಅವಸಾನಗೊಳ್ಳುತ್ತದೆ ಎಂಬುದಕ್ಕೆ ಈಗಾಗಲೇ ಹಲವು ನಿದರ್ಶನಗಳು ಸಿಕ್ಕಿವೆ.

ಹೊಸಪೇಟೆ: ಅಧ್ಯಾತ್ಮ ಮನೋಭಾವ, ಆಳವಾದ ವಿಚಾರ ಹಾಗೂ ಸಂಸ್ಕೃತಿಗಳನ್ನು ಒಳಗೊಂಡ ಭಾರತೀಯ ಚಿಂತನೆಯಲ್ಲಿ ವಿಶ್ವವನ್ನೇ ಗೆಲ್ಲುವ ಶಕ್ತಿ ಇದೆ. ಸ್ವಾಮಿ ವಿವೇಕಾನಂದರೇ ಇದಕ್ಕೊಂದು ದಿವ್ಯ ನಿದರ್ಶನ ಎಂದು ಗದಗ–ವಿಜಯಪುರಗಳ ವಿವೇಕಾನಂದ ರಾಮಕೃಷ್ಣ ಆಶ್ರಮಗಳ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಶ್ರೀ ಹೇಳಿದರು.ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ನಡೆದ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯುವ ದಿನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಸ್ವಾಮಿ ವಿವೇಕಾನಂದರು ವಿದೇಶಿ ಶಿಕ್ಷಣ ಬಿತ್ತಿದ್ದ ಚಿಂತನೆಯನ್ನು ಧಿಕ್ಕರಿಸಿ ಭಾರತೀಯತೆ ಮೈಗೂಡಿಸಿದ್ದರಿಂದಲೇ ಮಹಾನ್ ಚಿಂತಕರಾದರು ಎಂದರು.

ಭಾರತೀಯ ಚಿಂತನೆ ವಿಶ್ವಕ್ಕೆ ತಲುಪದಿದ್ದರೆ ಇಡೀ ವಿಶ್ವವೇ ಅವಸಾನಗೊಳ್ಳುತ್ತದೆ ಎಂಬುದಕ್ಕೆ ಈಗಾಗಲೇ ಹಲವು ನಿದರ್ಶನಗಳು ಸಿಕ್ಕಿವೆ. ಭಾರತೀಯ ಅಧ್ಮಾತ್ಮ ತತ್ವಗಳನ್ನು ಮೈಗೂಡಿಸಿದ್ದರಿಂದ ಈ ಪ್ರಖರ ಚಿಂತನೆ ಅವರಲ್ಲಿ ಮೂಡುವಂತಾಯಿತು. ಅವರು ನಿರ್ವಿಕಲ್ಪ ಸಮಾಧಿ ಸ್ಥಿತಿಗೆ ಹೋಗಿದ್ದರಿಂದಲೇ ಈ ಎಲ್ಲ ಚಿಂತನೆಗಳನ್ನು ನಡೆಸುವುದು ಸಾಧ್ಯವಾಯಿತು ಎಂದರು.

ಭಾರತೀಯರ ಗತ ವೈಭವವನ್ನು ಯುರೋಪಿಯನ್ನರು ದಾಖಲಿಸಿದ್ದಾರೆ. ನಮ್ಮಲ್ಲಿರುವ ಅನುಮಾನ ಪ್ರವೃತ್ತಿ, ಸಿನಿಕತನಗಳು ನಮ್ಮ ಅಭಿವೃದ್ಧಿಗೆ ಹಿನ್ನಡೆಯಾಗಿವೆ. ಇದೀಗ ಆಧುನಿಕ ಹಾರ್ವರ್ಡ್‌ ವಿಶ್ವವಿದ್ಯಾಲಯಗಳು ನಡೆಸುತ್ತಿರುವ ನಿರ್ವಿಕಲ್ಪ ಸಮಾಧಿ, ರಾಜಯೋಗ ಸಮಾಧಿ, ಸಚ್ಚಿದಾನಂದ ಸ್ಥಿತಿಗಳನ್ನು ಭಾರತೀಯರು ಸಾವಿರಾರು ವರ್ಷಗಳ ಹಿಂದೆಯೇ ತೋರಿಸಿಕೊಟ್ಟಿದ್ದರು. ನಮ್ಮ ಶಕ್ತಿ ನಮಗೆ ಗೊತ್ತಿಲ್ಲ, ಅದನ್ನು ತಿಳಿಯುವ ಪ್ರಯತ್ನ ಇನ್ನಾದರೂ ಮಾಡಬೇಕು ಎಂದರು.

ಪತಂಜಲಿ ಯೋಗ ಸಮಿತಿ ರಾಜ್ಯ ಯುವ ಪ್ರಭಾರಿ ಕಿರಣ್‌ ಕುಮಾರ, ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಾ, ಬಳ್ಳಾರಿ ಜಿಲ್ಲಾ ಪ್ರಭಾರ ರಾಜೇಶ್‌ ಕರ್ವಾ, ಫ್ರೀಡಂ ಪಾರ್ಕ್‌ ಯೋಗ ಸಮಿತಿಯ ಅನಂತ ಜೋಶಿ, ಶ್ರೀಧರ, ಶ್ರೀರಾಮ್‌, ವೆಂಕಟೇಶ್, ಶಿವಮೂರ್ತಿ, ಅಶೋಕ ಚಿತ್ರಗಾರ,ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಸೇರಿದಂತೆ ಇತರೆ ಕೇಂದ್ರಗಳ ಸಂಚಾಲಕರು, ಯೋಗಸಾಧಕರು ಪಾಲ್ಗೊಂಡಿದ್ದರು.

ಹೊಸಪೇಟೆಯಲ್ಲಿ ಭಾನುವಾರ ನಡೆದ ಯುವ ದಿನ ಕಾರ್ಯಕ್ರಮದಲ್ಲಿ ಗದಗ–ವಿಜಯಪುರಗಳ ವಿವೇಕಾನಂದ ರಾಮಕೃಷ್ಣ ಆಶ್ರಮಗಳ ಅಧ್ಯಕ್ಷ ಶ್ರೀನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.