ಸಾರಾಂಶ
ಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತದೆ.
ಕುಂತಳೋತ್ಸವ ಉದ್ಘಾಟಿಸಿದ ಸಾಹಿತಿ ಅಭಿಮತ
ಕನ್ನಡಪ್ರಭ ವಾರ್ತೆ ಕುಕನೂರುಭಾರತೀಯರು ಮೂಲತಃ ಉತ್ಸವ ಪ್ರಿಯರು. ಉತ್ಸವ ಇದ್ದಲ್ಲಿ ಸಂಸ್ಕೃತಿ ಇರುತ್ತದೆ. ಸಾಂಕೇತಿಕ ಉದ್ದೇಶ, ಮೌಲ್ಯ, ಸಂದೇಶಗಳೂ ಇರುತ್ತವೆ ಎಂದು ಹಿರಿಯ ಸಾಹಿತಿ ಡಾ. ಕೆ. ಬಿ ಬ್ಯಾಳಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾನಸ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಜರುಗಿದ ಕುಂತಳೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರ್ವ ಎಂದರೆ ಹಬ್ಬ. ಸಂತೋಷ ಕೊಡುವ ದಿನ. ಹಬ್ಬ ಆಚರಿಸುವ ಇನ್ನೊಂದು ಅಂಗ ವ್ರತ. ನಿಯಮದಲ್ಲಿದ್ದುಕೊಂಡು ಕಾರ್ಯಾನುಷ್ಠಾನ ಮಾಡುವ ವ್ರತ ದೇಹ, ಮನಸ್ಸು, ಇಂದ್ರಿಯ, ಬುದ್ಧಿಗಳನ್ನು ಸಂಸ್ಕಾರಗೊಳಿಸುತ್ತದೆ. ಈ ಎಲ್ಲ ತತ್ವದರ್ಶಗಳನ್ನು ತಿಳಿದುಕೊಂಡು ಹಬ್ಬದಾಚರಣೆ ಮಾಡಬೇಕು ಎಂದರು.ಕುಂತಳ ಭವ್ಯ ಪರಂಪರೆಯ ನಾಡು, ಪುರಾತನ ಇತಿಹಾಸದಲ್ಲಿ ಚಂದ್ರಹಾಸನೆಂಬ ರಾಜ ಆಳಿದ್ದಾನೆ. ಇಲ್ಲಿ ಐತಿಹಾಸಿಕ ದೇವಸ್ಥಾನಗಳಾದ ನವಲಿಂಗೇಶ್ವರ ಹಾಗೂ ಮುಷ್ಟಿ ಕಲ್ಮೇಶ್ವರ ಒಳಗೊಂಡಿದೆ. ಕಲ್ಲಿನ ನಾಡು ಎಂದು ಪ್ರಸಿದ್ಧವಾದ ಕುಂತಳ ಈಗ ಕುಕನೂರಾಗಿ ಬದಲಾವಣೆಯಾಗಿದೆ. ಅದೇ ರೀತಿ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಯಾಗಿದೆ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ಮಾತನಾಡಿ, ಐತಿಹಾಸಿಕ ಪ್ರಸಿದ್ಧವಾದ ಕುಂತಳಾಪುರದ ಕುಂತಳೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಸಮಯೋಚಿತವಾಗಿದೆ. ಸಂಘಗಳು ಸ್ವಯಂ ಸ್ಫೂರ್ತಿಯಿಂದ ಇಂತಹ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಪ್ರಾಚಾರ್ಯ ಈಶಪ್ಪ ಮಳಗಿ ಹಾಗೂ ವೈದ್ಯ ಜಂಬೂನಾಥ ಅಂಗಡಿ ಮಾತನಾಡಿದರು.
ಅಮೋಘಸಿದ್ದೇಶ್ವರ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಸಂಗೀತ ಶಿಕ್ಷಕ ಮುರಾರಿ ಭಜಂತ್ರಿ ಸಂಗಡಗರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. ಯುವ ಗಾಯಕ ಭರಮಪ್ಪ ಸಾಬಳ್ಳಿ ಕುಂತಳೋತ್ಸವ ಬಗ್ಗೆ ಸ್ವರಚಿತ ಗಾಯನ ಹಾಡಿದರು. ಸಮೂಹ ನೃತ್ಯ ಪ್ರದರ್ಶನಗೊಂಡವು.ಉಪನ್ಯಾಸಕ ಮಾರುತಿ ಎಚ್., ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಸ್. ಅಂಗಡಿ, ಭರಮಪ್ಪ ನೋಟಗಾರ, ಭರಮಪ್ಪ ಸಾಬಳ್ಳಿ, ಮಹಾಂತೇಶ ಹಂಡಿ, ಜೀವನ ಸಾಬ್, ಅಶೋಕ ಚನ್ನಪ್ಪನಹಳ್ಳಿ, ಮುತ್ತುರಾಜ ದೇವರಮುನಿ ಇದ್ದರು.