ಭಾರತೀಯರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತು ಕಲಿಸಿಕೊಡಬೇಕಾದ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಆಶಯಗಳು ಭಾರತೀಯರ ನರನಾಡಿಗಳಲ್ಲೇ ಹಾಸುಹೊಕ್ಕಾಗಿವೆ.
ಧಾರವಾಡ:
ಭಾರತೀಯರಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತು ಕಲಿಸಿಕೊಡಬೇಕಾದ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ಆಶಯಗಳು ಭಾರತೀಯರ ನರನಾಡಿಗಳಲ್ಲೇ ಹಾಸುಹೊಕ್ಕಾಗಿವೆ. ಭಗವಾನ್ ಬುದ್ಧರ ಕಾಲದ ಗಣರಾಜ್ಯ ವ್ಯವಸ್ಥೆ, ಅಶೋಕನ ಆಡಳಿತ ಹಾಗೂ ಬಸವೇಶ್ವರರ ಕಾಲದಲ್ಲಿ ಸ್ಥಾಪನೆಯಾದ ಅನುಭವ ಮಂಟಪ ಇವೆಲ್ಲವೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರು ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಯುವ ಸಂಸತ್ ಉದ್ಘಾಟಿಸಿದ ಅವರು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಕರು, ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅತ್ಯಂತ ಮುಖ್ಯ. ಈ ಉದ್ದೇಶದಿಂದ ಶಾಲೆ, ಸರ್ಕಾರಿ ಕಚೇರಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ, ಸಮಾನತೆ ಮತ್ತು ಸಹೋದರತ್ವದ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಸದಾ ಸಂತೋಷದಿಂದ ಇರಬೇಕು. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಮತ್ತು ವಾಗ್ವಾದಗಳು ಸಹಜ. ಆದರೆ, ಅವು ವೈಯಕ್ತಿಕ ಸಂಬಂಧಗಳಿಗೆ ಅಡ್ಡಿಯಾಗಬಾರದು. ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಪರಸ್ಪರ ಸ್ನೇಹದಿಂದ ಬೆರೆಯುವ ಮನೋಭಾವ ಇರಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಸ್ನೇಹಲ್ ಆರ್,., ವಿಪ ಸದಸ್ಯ ಲಿಂಗರಾಜ ಪಾಟೀಲ ಮಾತನಾಡಿ, ಯುವ ಸಂಸತ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಂಸದೀಯ ಕಾರ್ಯವೈಖರಿ, ಮಾತನಾಡುವ ಕಲೆ, ವಿಚಾರ ಮಂಡನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿವೆ ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ್, ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಪುಂಡಲೀಕ ಮಾನವರಸ, ಎಸಿಪಿ ಪ್ರಶಾಂತ ಸಿದ್ದನಗೌಡರ, ಡಿಡಿಪಿಐ ಉಮೇಶ ಬೊಮ್ಮಕ್ಕನವರ ಇದ್ದರು.