ಯಲಬುರ್ಗಾ ಪಟ್ಟಣದ ಬುದ್ಧ - ಬಸವ - ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯಲಬುರ್ಗಾ-ಕುಕನೂರು ಅವಳಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಲಬುರ್ಗಾ: ಭಾರತದ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಿ, ಅದರ ಆಶಯಗಳ ಅಡಿಯಲ್ಲಿ ಬದುಕಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮೀಳಾ ಎಂ. ಹೇಳಿದರು.
ಪಟ್ಟಣದ ಬುದ್ಧ - ಬಸವ - ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯಲಬುರ್ಗಾ-ಕುಕನೂರು ಅವಳಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನೀಡಿದೆ. ಎಲ್ಲರೂ ಸಂವಿಧಾನದ ಮಾರ್ಗ ಅನುಸರಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನವನ್ನು ವಿಶ್ವದ ಹಲವು ರಾಷ್ಟ್ರಗಳು ಮಾದರಿಯಾಗಿ ಪರಿಗಣಿಸಿವೆ. ಇಂತಹ ಮಹತ್ವದ ಸಂವಿಧಾನವನ್ನು ದೇಶಕ್ಕೆ ನೀಡಿದ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಮಕ್ಕಳಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಹೊಂಬಳ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಯುವ ಸಂಸತ್ತು ಕಾರ್ಯಕ್ರಮ ಸಹಕಾರಿಯಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದರು.
ಕುಕನೂರು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರು ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕುರಿತು ಅರಿವು ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ಮಹಾಂತೇಶ ಈ.ಟಿ. ಮಾತನಾಡಿದರು.
ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬೆಟದೇಶ ಮಾಳೇಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಬನ್ನಿಗೋಳ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಇತರರಿದ್ದರು.ವಿಧಾನಸಭೆ ಮಾದರಿಯಲ್ಲಿ ಯುವ ಸಂಸತ್ ಕಲಾಪ: ಯಲಬುರ್ಗಾ-ಕುಕನೂರು ಅವಳಿ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮ ವಿಧಾನಸಭೆಯ ಕಲಾಪಗಳ ಮಾದರಿಯಲ್ಲಿ ನಡೆಯಿತು. ರಾಜ್ಯದಲ್ಲಿ ಎದುರಾಗಿರುವ ಬರಗಾಲ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ, ನೀರಾವರಿ ಯೋಜನೆಗಳು, ರೈತರ ಸಮಸ್ಯೆಗಳು ಹಾಗೂ ರಾಜಧಾನಿ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳು ಸದನದಲ್ಲಿ ಚರ್ಚೆ ನಡೆಸಿದರು.ಸಭಾಪತಿ, ಮುಖ್ಯಮಂತ್ರಿ, ಸಚಿವರು, ಆಡಳಿತ ಪಕ್ಷದ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಶಾಸಕರ ಪಾತ್ರಗಳನ್ನು ವಿದ್ಯಾರ್ಥಿಗಳು ನಿರ್ವಹಿಸಿದರು. ಒಟ್ಟು 224 ಜನಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ನಡೆದ ಈ ಅಣಕು ಸದನವು ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ಪರಿಚಯಿಸಿತು.