ಸಾರಾಂಶ
ಶಿರಸಿ: ದೇಶದ ಮೊದಲ ಭಾರತ್ ಏರ್ ಫೈ ೭ ನೆಟ್‌ವರ್ಕ್ ಸೇವೆಯನ್ನು ಯಾಣದಲ್ಲಿ ಸಂಸದ ಅನಂತಕುಮಾರ ಹೆಗಡೆ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಸಂಸದರು, ಭಾರತ್ ಸಂಚಾರ ನಿಗಮ, ಅರಣ್ಯ ಇಲಾಖೆಗಳ ಸಹಕಾರದಲ್ಲಿ ಜಪಾನ್ ತಂತ್ರಜ್ಞಾನ ಹೊಂದಿದ ಏರ್ ಫೈ ೭ ಮೂಲಕ ನೆಟ್‌ವರ್ಕ್ ಇಲ್ಲದ ಸ್ಥಳದಲ್ಲೂ ನೇರವಾಗಿ ಮಾತನಾಡುವ, ವೈಫೈ ಕಾಲಿಂಗ್ ಮಾಡುವ, ಹಣ ವರ್ಗಾವಣೆ ಕೂಡ ಮಾಡಬಹುದಾಗಿದೆ. ಶಿರಸಿ ನಗರದಲ್ಲೂ ಇದರ ಪ್ರಾಯೋಗಿಕ ಅನುಷ್ಠಾನ ಮಾಡಲಾಗಿದೆ. ಅದನ್ನೂ ಶೀಘ್ರ ಉದ್ಘಾಟಿಸಲಾಗುತ್ತದೆ ಎಂದರು.
ಭಾರತ್ ಏರ್ ಫೈ ಎಂದರೆ ವೈಫೈ ೭ ತಂತ್ರಜ್ಞಾನ ಆಗಿದೆ. ಒಂದು, ಎರಡು ಕಿಲೋಮೀಟರ್ ತನಕ ವೈಫೈ ಮಾಡಬಹುದು. ಭಾರತ್ ಏರ್ ಫೈ ಹಾಗೂ ಬಿಎಸ್‌ಎನ್‌ಎಲ್ ಶೇ. ೫೦ರ ಸಹಭಾಗಿತ್ವ ಇದೆ. ಯಾವುದೇ ಹಳ್ಳಿಯಲ್ಲಿ ವೈಫೈ ವಿಲೇಜ್ ಮಾಡುವ ಮೂಲಕ ಕೈಗಾರಿಕೆ, ವೃತ್ತಿ ಪರತೆಗೆ ತೊಡಗಿಕೊಳ್ಳಬಹುದು ಎಂದು ಹೇಳಿದರು.ಈ ವೇಳೆ ಭಾರತ್ ವೈಫೈ ಸಿಇಒ ನಾಗರಾಜ, ಜಪಾನ್ ದ ಕ್ವ್ಯಾಕ್, ಕೃಷ್ಣ ಎಸಳೆ, ಸುರೇಶ ಶೆಟ್ಟಿ, ರಾಜೇಶ ಶೆಟ್ಟಿ ಇದ್ದರು.
ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಣೆ
ಇಂತಹ ಪುಣ್ಯ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಹೆಸರು ನೆನಪು ಮಾಡಿಕೊಳ್ಳಬಾರದು ಎನ್ನುವ ಮೂಲಕ ಸಂಸದ ಅನಂತಕುಮಾರ ಹೆಗಡೆ ಮುಖ್ಯಮಂತ್ರಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಶುಕ್ರವಾರ ಅವರು ಶ್ರೀಕ್ಷೇತ್ರ ಯಾಣದಲ್ಲಿ ಶಿವರಾತ್ರಿ ನಿಮಿತ್ತ ಭೈರವೇಶ್ವರ ದೇವರಿಗೆ ಜಲಾಭಿಷೇಕ ನಡೆಸಿದ ನಂತರ ಮಾತನಾಡಿದ ಅವರು, ಟಿಕೆಟ್ ಕೊಡುವುದು ಪಕ್ಷದ ಕೆಲಸ. ಬೇರೆಯವರಿಗೇಕೆ ತಲೆಬಿಸಿ. ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ. ಬಿಜೆಪಿ ಗೆಲ್ಲುತ್ತದೆ ಎಂದೂ ಹೇಳಿದರು. ಇದೇ ವೇಳೆ ದೇಶದ ಮೊದಲ ಭಾರತ ವೈಫೈ ೭ ಸೇವೆ ಲೋಕಾರ್ಪಣೆಗೊಳಿಸಿದರು.