ಕೆಲ ಅಧಿಕಾರಿಗಳು, ಸಿಬ್ಬಂದಿ ಅಸಡ್ಡೆ, ರೈತರು, ಸಾರ್ವಜನಿಕರಿಗೆ ಮಾಹಿತಿ ಕೊರತೆ

| Published : Jun 27 2024, 01:10 AM IST

ಕೆಲ ಅಧಿಕಾರಿಗಳು, ಸಿಬ್ಬಂದಿ ಅಸಡ್ಡೆ, ರೈತರು, ಸಾರ್ವಜನಿಕರಿಗೆ ಮಾಹಿತಿ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

100ಕ್ಕೆ ಶೇ.70 ರಷ್ಟು ಭಾಗದ ಆಸ್ತಿಗಳು ಇನ್ನೂ ಕೂಡ ಪೌತಿ ಖಾತೆಗಳು ಆಗಿಲ್ಲ. ಆಸ್ತಿ ಭಾಗವಾಗದೇ ತಾತ, ಮುತ್ತಾತ ನ ಹೆಸರಿನಲ್ಲೇ ಇರುವುದು, ಕುಟುಂಬದವರು ಒಟ್ಟಿಗೆ ಸೇರಿ ಪೌತಿ ಖಾತೆ ಮಾಡಿಸಿಕೊಳ್ಳದೇ ಇರುವುದು ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಒಂದು ಸಮಸ್ಯೆ ಅಕ್ರಮ ಆಸ್ತಿಗಳಿಕೆಗೆ ದಾರಿ ಮಾಡಿಕೊಡಬಹುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೆಲ ಅಧಿಕಾರಿಗಳು, ಸಿಬ್ಬಂದಿ ಅಸಡ್ಡೆ, ರೈತರು, ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದಾಗಿ ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ತಾಲೂಕಿನ ಬೂಕನಕೆರೆ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕ್ರಿಯಾಶೀಲ ಜಿಲ್ಲಾಧಿಕಾರಿ ಹಾಗೂ ತಾಲೂಕಿನಲ್ಲಿ ತಹಸೀಲ್ದಾರ್ ಇದ್ದರೂ ತಾಲೂಕು ಮಟ್ಟದ ಕಂದಾಯ ಇಲಾಖೆಯಲ್ಲಿ ಕೆಲ ಸಿಬ್ಬಂದಿಯಿಂದಾಗುವ ತಪ್ಪುಗಳಿಂದ ಹಲವು ಸಮಸ್ಯೆಗಳು ಉದ್ಭವಿಸಿ ಅಣ್ಣ - ತಮ್ಮಂದಿರಲ್ಲಿ ಆಸ್ತಿ ವ್ಯಾಜ್ಯಗಳು ಉಂಟಾಗುತ್ತಿವೆ ಎಂದರು.

100ಕ್ಕೆ ಶೇ.70 ರಷ್ಟು ಭಾಗದ ಆಸ್ತಿಗಳು ಇನ್ನೂ ಕೂಡ ಪೌತಿ ಖಾತೆಗಳು ಆಗಿಲ್ಲ. ಆಸ್ತಿ ಭಾಗವಾಗದೇ ತಾತ, ಮುತ್ತಾತ ನ ಹೆಸರಿನಲ್ಲೇ ಇರುವುದು, ಕುಟುಂಬದವರು ಒಟ್ಟಿಗೆ ಸೇರಿ ಪೌತಿ ಖಾತೆ ಮಾಡಿಸಿಕೊಳ್ಳದೇ ಇರುವುದು ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚು ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ಒಂದು ಸಮಸ್ಯೆ ಅಕ್ರಮ ಆಸ್ತಿಗಳಿಕೆಗೆ ದಾರಿ ಮಾಡಿಕೊಡಬಹುದು ಎಂದು ಎಚ್ಚರಿಸಿದರು.

ಸರ್ಕಾರಿ ಆಸ್ತಿ ರಕ್ಷಿಸುವುದು ಅಧಿಕಾರಿಗಳ ಕರ್ತವ್ಯ. ಸರ್ಕಾರದ ಆಸ್ತಿಗಳ ವ್ಯಾಪ್ತಿಯನ್ನು ಮೊದಲು ಗುರುತು ಮಾಡಿಕೊಳ್ಳುವುದು ಅತ್ಯವಶ್ಯಕ. ರೈತರು, ಸಾರ್ವಜನಿಕರು ನೀಡಿರುವ ಅಹವಾಲುಗಳನ್ನು ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೇ ಶೀಘ್ರವೇ ಸ್ಪಂದಿಸಿ, ಸಮಸ್ಯೆಗಳನ್ನು ನಿಯಮಾನುಸಾರ ಬಗೆಹರಿಸಲು ಮುಂದಾಗಬೇಕು ಎಂದು ಸೂಚಿಸಿದರು.

ಸರ್ಕಾರ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸುವ ದೃಷ್ಟಿಯಿಂದಲೇ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಮೂಲಕ ಸಮಸ್ಯೆಗಳನ್ನು ಸ್ಥಳದಲ್ಲೆ ಬಗೆಹರಿಸಲಾಗುತ್ತಿದೆ. ಆದರೆ, ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಕಾರ್ಯಕ್ರಮ ಹೆಚ್ಚು ಪ್ರಚಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೌತಿ ಖಾತಾ ಆಂದೋಲನ, ಪಿಂಚಣಿ, ಆರ್.ಟಿ.ಸಿ ತಿದ್ದುಪಡಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಗ್ರಾಪಂ ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ಹೆಚ್ಚು ಜನರು ಭಾಗವಹಿಸಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಭಿಪ್ರಾಯಪಟ್ಟರು.

ಜನಸ್ಪಂದನದಲ್ಲಿ ಸ್ವೀಕೃತವಾಗುವ ಪ್ರತಿಯೊಂದು ಅರ್ಜಿಯ ವಿವರವನ್ನು ಐ.ಪಿ.ಜಿ.ಆರ್.ಎಸ್ ತಂತ್ರಾಂಶದಲ್ಲಿ ನಮೂದಿಸಿ ಸಂಬಂಧಿಸಿದ ಇಲಾಖೆಗೆ ಕಳುಹಿಸಿಕೊಡಲಾಗುವುದು. ಎಲ್ಲಾ ಅರ್ಜಿಗಳ ವಿಲೇವಾರಿ ಕುರಿತು ಸರ್ಕಾರದ ಕಾರ್ಯದರ್ಶಿಗಳು ನಿಗಾ ವಹಿಸುತ್ತಾರೆ ಎಂದು ಹೇಳಿದರು.

ರೈತರು ಅಥವಾ ಜನಸಮಾನ್ಯರು ಕರೆ ಮಾಡಿದಾಗ ಜಿಲ್ಲಾಧಿಕಾರಿಗಳು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಾರೆ. ಒಂದು ವೇಳೆ ಕಾನೂನು ವ್ಯಾಪ್ತಿಯಲ್ಲಿ ಬರದಿದ್ದರೆ ಮನವರಿಕೆ ಮಾಡಿಕೊಡುತ್ತಾರೆ. ಇವರ ಕಾರ್ಯವೈಖರಿ ಶ್ಲಾಘನೀಯ. ಅಧಿಕಾರಿಗಳು ಸಹ ಜನಸಮಾನ್ಯರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಕ್ ತನ್ವಿರ್ ಆಸೀಫ್, ಡಿವೈಸ್ಪಿ ಸುಮಿತ್, ಉಪ ವಿಭಾಗಧಿಕಾರಿ ಎಲ್.ಎಂ.ನಂದೀಶ್, ತಹಸೀಲ್ದಾರ್ ನಿಸರ್ಗಪ್ರಿಯ, ತಾಪಂ ಇಒ ಬಿ.ಎಸ್.ಸತೀಶ್, ಗ್ರಾಪಂ ಅಧ್ಯಕ್ಷ ಶ್ಯಾಮ್ ಪ್ರಸಾದ್, ತಾಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೆಗೌಡ, ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ, ಗಂಜೀಗೆರೆ ಗ್ರಾಪಂ ಅಧ್ಯಕ್ಷ ಪರಮೇಶ್, ರಾಜಶ್ವ ನಿರೀಕ್ಷಕರಾದ ಜ್ಞಾನೇಶ್, ಚಂದ್ರಕಲಾ, ಗೋಪಾಲಕೃಷ್ಣ, ನರೇಂದ್ರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಸೇರಿದಂತೆ ಉಪಸ್ಥಿತರಿದ್ದರು.