ಸಾರಾಂಶ
- ತಾತ್ಕಾಲಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ತೆರವುಗೊಳಿಸದ ಬಗ್ಗೆ ಆಕ್ರೋಶ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ಹೊಸದಾಗಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ನಿರ್ಮಾಣದ ಸಲುವಾಗಿ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಬಸ್ ನಿಲ್ದಾಣಗಳನ್ನು ಅಧಿಕಾರಿಗಳ ತೆರವುಗಳಿಸಿಲ್ಲ. ಈ ದಿವ್ಯ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಬುಧವಾರ ಸ್ವತಃ ತಾವೇ ಜೆಸಿಬಿ ಚಲಾಯಿಸುವ ಮೂಲಕ ತಾತ್ಕಾಲಿಕ ನಿಲ್ದಾಣಗಳ ತೆರವಿಗೆ ಚಾಲನೆ ನೀಡಿದರು.ದಿನೇಶ ಕೆ. ಶೆಟ್ಟಿ ಮಾತನಾಡಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹೊಸದಾಗಿ ನಿರ್ಮಿಸಿರುವ ನಿಲ್ದಾಣಕ್ಕೆ ಸ್ಥಳಾಂತರಗೊಂಡು ತಿಂಗಳುಗಳೇ ಕಳೆಯುತ್ತಿವೆ. ಈ ಹಿನ್ನೆಲೆ ತಾತ್ಕಾಲಿಕ ನಿರ್ಮಿಸಿದ್ದ ಬಸ್ ನಿಲ್ದಾಣ ಜವಾಬ್ದಾರಿಯಿಂದ ತೆರವುಗೊಳಿಸಲು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ, ಇನ್ನೂ ತೆರವು ಕಾರ್ಯ ಕೈಗೊಂಡಿಲ್ಲ. ಇದರಿಂದ ಕ್ರೀಡಾಪಟುಗಳು, ವಾಯುವಿಹಾರಿಗಳಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಸ್ವತಃ ನಾವೇ ತಾತ್ಕಾಲಿಕ ಬಸ್ ನಿಲ್ದಾಣಗಳ ತೆರವು ಕೆಲಸ ಆರಂಭ ಮಾಡಿದ್ದೇವೆ ಎಂದರು.
ನಿಲ್ದಾಣಗಳು ಸ್ಥಳಾಂತರವಾದ ಮೇಲೂ ಇಲ್ಲಿನ ಸಾಮಾನು, ಸಿಮೆಂಟ್ ಬ್ಲಾಕ್‌ಗಳನ್ನು ತೆರವುಗೊಳಿಸಲು ಸಂಸ್ಥೆಗೆ ಏನು ಅಡ್ಡಿ? ಎಷ್ಟು ದಿನ ತಾಳ್ಮೆಯಿಂದ ಕಾಯಬೇಕು? ಒಬ್ಬ ಕ್ರೀಡಾಪಟುವಾಗಿ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷನಾಗಿ ಸಾಕಷ್ಟು ಮನವಿ ಮಾಡಿದ್ದೇನೆ. ಆದರೂ, ಅಧಿಕಾರಿಗಳು ಸ್ಪಂದಿಸಲ್ಲ ಎಂದು ಕಿಡಿಕಾರಿದರು.ಕ್ರೀಡಾಪಟುಗಳಾದ ತಿಮ್ಮೇಶ, ಪರಶುರಾಮ, ಗೋಪಾಲ, ಚೇತನ ಅಜ್ಜಂಪುರ, ಬಕ್ಕೇಶ, ದಿವಾಕರ, ಶಿವರಾಜ, ಸತೀಶ್ ಶೆಟ್ಟಿ, ಯುವರಾಜ ಇತರರು ಇದ್ದರು.
- - - -12ಕೆಡಿವಿಜಿ7, 8, 9ಜೆಪಿಜಿ:ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ತಾತ್ಕಾಲಿಕ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ತೆರವುಗೊಳಿಸಲು ಜೆಸಿಬಿಗೆ ಜಿಲ್ಲಾ ಕ್ರೀಡಾಪಟುಗಳ ಸಂಘ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಚಾಲನೆ ನೀಡಿದರು.