ಇಂದಿರಾ ಕ್ಯಾಂಟೀನ್‌ ಸಿಎಂ ಆಸಕ್ತಿ ಯೋಜನೆ: ಶಾಸಕ ಭೀಮಸೇನ ಚಿಮ್ಮನಕಟ್ಟಿ

| Published : Oct 27 2024, 02:20 AM IST

ಸಾರಾಂಶ

ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಂತ ಆಸಕ್ತಿ ಯೋಜನೆಗಳಲ್ಲಿ ಒಂದಾಗಿದೆ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಶ್ರೀಮಂತರು, ಕಾರು, ಬಂಗಲೆ ಹೊಂದಿರುವವರಿಗೆ ದೊಡ್ಡ ದೊಡ್ಡ ಹೋಟೆಲ್‌ಗಳಿದ್ದರೆ, ಬಡವರಿಗೆ, ಕೂಲಿ ವರ್ಗದ ಶ್ರಮಜೀವಿಗಳಿಗೆ ಇಂದಿರಾ ಕ್ಯಾಂಟೀನ್‌ ಅತೀ ಅಗತ್ಯವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಶನಿವಾರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟೀನ್ ಭೂಮಿ ಪೂಜೆ ಮತ್ತು ₹12.25 ಲಕ್ಷಗಳ ಅನುದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅತ್ಯಂತ ಆಸಕ್ತಿ ಯೋಜನೆಗಳಲ್ಲಿ ಒಂದಾಗಿದೆ. ಅವರು ಬಡವರಿಗಾಗಿ ಇಂತಹದೊಂದು ಕಾರ್ಯಕ್ರಮ ಮಾಡಿದ್ದು, ಗುಳೇದಗುಡ್ಡ ಮತ್ತು ಕೆರೂರ ಎರಡೂ ಪಟ್ಟಣಗಳಿಗೆ ಮಂಜೂರಿ ಮಾಡಿಸಿಕೊಂಡು ತರಲಾಗಿದೆ. ಬಡಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇಲ್ಲಿನ ಪುರಸಭೆ ಸದಸ್ಯರು, ಪಕ್ಷದ ಮುಖಂಡರು, ಹಿರಿಯರು ತಿಂಗಳಲ್ಲಿ ಒಂದು ಬಾರಿಯಾದರೂ ಇಂದಿರಾ ಕ್ಯಾಂಟೀನ್‌ಗೆ ಬಂದು ಅಲ್ಲಿಯ ಆಹಾರವನ್ನು ಸೇವಿಸಿದಾಗ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಗಮನಿಸಿದಂತಾಗುತ್ತದೆ ಎಂದರು.

ಗುಳೇದಗುಡ್ಡವನ್ನು ನಾನು ದೊಡ್ಡ ಮಟ್ಟಕ್ಕೆ ಒಯ್ಯಬೇಕೆಂಬ ಕನಸಿದೆ. ಯಾಕೆಂದರೇ ನಾವೂ ಗುಳೇದಗುಡ್ಡ ತಾಲೂಕಿನ ಗ್ರಾಮದವರು. ನಮ್ಮ ತಂದೆ ಕಲಿತ ಶಾಲೆಗೆ ಶತಮಾನ ಕಳೆದಿದೆ. ಅದನ್ನು ಉನ್ನತ ಮಟ್ಟಕ್ಕೆ ಒಯ್ಯುವ ಆಸಕ್ತಿ ಇದೆ. ಇಲ್ಲಿನ ಕಂದಗಲ್ ಹನಮಂತರಾಯ ರಂಗ ಮಂದಿರ, ಗಾಂಧಿ ಭವನ ಇವುಗಳಿಗೆಲ್ಲ ಸದ್ಯಕ್ಕೆ ಅನುದಾನ ಇಲ್ಲ. ಹಂತ ಹಂತವಾಗಿ ಅಭಿವೃದ್ಧಿ ಪಡಿಸುವೆ ಎಂದು ಭರವಸೆ ನೀಡಿದರು ಎಂದರು.

ಗುಳೇದಗುಡ್ಡದಲ್ಲಿ ಮುಂದಿನ ಕೆಡಿಪಿ ಸಭೆ:

ಪುರಸಭೆ ಸದಸ್ಯ ಸಂತೋಷ ನಾಯನೇಗಲಿ ತಮ್ಮ ಭಾಷಣದಲ್ಲಿ, ಸಿದ್ದರಾಮಯ್ಯನವರು ಬಾದಾಮಿ ಶಾಸಕರಾಗಿದ್ದಾಗ ಒಂದು ಬಾರಿಯೂ ಗುಳೇದಗುಡ್ಡದಲ್ಲಿ ಕೆಡಿಪಿ ಸಭೆ ಮಾಡಲಿಲ್ಲ. ತಾವಾದರೂ ಮಾಡಿ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ವಿನಂತಿಸಿಕೊಂಡಾಗ, ಶಾಸಕರು ತಮ್ಮ ಭಾಷಣದಲ್ಲಿ ಮತಕ್ಷೇತ್ರದಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ಎರಡೂ ತಾಲೂಕು ಕೇಂದ್ರ ಸ್ಥಳಗಳಾಗಿದ್ದು, ಕಳೆದ ಬಾರಿ ಎರಡೂ ತಾಲೂಕುಗಳನ್ನೊಳಗೊಂಡ ಕೆಡಿಪಿ ಸಭೆ ಬಾದಾಮಿಯಲ್ಲಿಯೇ ಮಾಡಲಾಗಿತ್ತು. ಮುಂದಿನ ಬಾರಿ ಗುಳೇದಗುಡ್ಡದಲ್ಲಿ ಮಾಡುತ್ತೇವೆ ಎಂದು ಶಾಸಕರು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಪುರಸಭೆ ಅನುದಾನದಲ್ಲಿ ಆಯ್ಕೆಗೊಂಡ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು ಚೆಕ್ ವಿತರಿಸಲಾಯಿತು. ₹3.25 ಲಕ್ಷಗಳ ಸಮುದಾಯ ಆರೋಗ್ಯ ಕೇಂದ್ರದ ಮೇಲ್ಛಾವಣೆ ಹಾಗೂ ಇತರೆ ದುರಸ್ತಿ, ₹4 ಲಕ್ಷಗಳ ಪಶು ಆಸ್ಪತ್ರೆ ಕಂಪೌಂಡ್ ದುರಸ್ತಿ, ಶೌಚಾಲಯ ಕಟ್ಟಡ ನಿರ್ಮಾಣ, ಪ್ಲಂಬಿಂಗ್ ಕೆಲಸ ಹಾಗೂ ಇತರೆ ದುರಸ್ತಿ, ₹5 ಲಕ್ಷಗಳ ಅನುದಾನದಲ್ಲಿ ಮ್ರೆಟಿಕ್ ನಂತರದ ಬಾಲಕರ ವಸತಿ ನಿಲಯದ ಶೌಚಾಲಯ ದುರಸ್ತಿ ಹಾಗೂ ಇತರೆ ದುರಸ್ತಿಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿತು.

ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಪುರಸಭೆ ಸದಸ್ಯ ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ, ಸಂತೋಷ ನಾಯನೇಗಲಿ, ಅಂಬರೇಶ ಕವಡಿಮಟ್ಟಿ, ಪುರಸಭೆ ಮಾಜಿ ಅಧ್ಯಕ್ಷರಾದ ವೈ.ಆರ್.ಹೆಬ್ಬಳ್ಳಿ, ರಾಜು ತಾಪಡಿಯಾ, ಪುರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಮುರಗೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಹಾಗೂ ಗಣ್ಯರು ವೇದಿಕೆ ಮೇಲಿದ್ದರು. 23 ಜನ ಪುರಸಭೆ ಸದಸ್ಯರಲ್ಲಿ 6 ಜನ ಮಾತ್ರ ಸಭೆಗೆ ಹಾಜರಾಗಿದ್ದರೆ, ಉಳಿದ 17 ಜನ ಸದಸ್ಯರು ಸಭೆಗೆ ಗೈರಾಗಿದ್ದರು. ಪ್ರಾಸ್ತಾವಿಕವಾಗಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ ಮಾತನಾಡಿದರು. ಬಿ.ವೈ. ಗೌಡರ ನಿರೂಪಿಸಿ ವಂದಿಸಿದರು.