ಇಂದಿರಾ ಕ್ಯಾಂಟೀನ್ ಬಡವರಿಗೆ ವರದಾನ: ಶಾಸಕ ಬಸವರಾಜ ಶಿವಣ್ಣನವರ

| Published : Jul 15 2025, 11:45 PM IST

ಸಾರಾಂಶ

ಇಂದಿರಾ ಕ್ಯಾಂಟೀನ್ ಅಕ್ಷರಶಃ ಬಡವರಿಗಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಅತ್ಯಂತ ಕಡಿಮೆ ದರದಲ್ಲಿ ಊಟ ಉಪಾಹಾರ ಹಾಗೂ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ.

ಬ್ಯಾಡಗಿ: ಗರೀಬಿ ಹಠಾವೋ ಎನ್ನುವ ಮೂಲಕ ತಮ್ಮ ಅಧಿಕಾರದುದ್ದಕ್ಕೂ ಬಡವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದಂತಹ ಧೀಮಂತ ನಾಯಕಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕಡಿಮೆ ದರದಲ್ಲಿ ಬಡವರಿಗಾಗಿ ಊಟ ಉಪಾಹಾರಕ್ಕಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಳವಾರ ಪಟ್ಟಣದ ಜಿಪಂ ಇಂಜಿನಿಯರಿಂಗ್ ಉಪವಿಭಾಗದ ಆವರಣದಲ್ಲಿ ನೂತನವಾಗಿ ಅರಂಭವಾದ ಇಂದಿರಾ ಕ್ಯಾಂಟೀನ್ಅನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು.

ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡುವ ಮೂಲಕ ಮಹಿಳಾ ಪ್ರಧಾನಿಯಾಗಿ ಇಡೀ ವಿಶ್ವವೇ ಅಚ್ಚರಿಪಡುವಂತೆ ಆಡಳಿತ ನಡೆಸಿದ ಇಂದಿರಾಗಾಂಧಿ ಅವರ ಯೋಜನೆಗಳು ಮಾತ್ರ ಭಾರತದಾದ್ಯಂತ ನೆನಪು ಉಳಿಯುವಂತೆ ಮಾಡಿದೆ. ಹೀಗಾಗಿ ಅವರ ನೆನಪಿಗೋಸ್ಕರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು ಅತ್ಯಂತ ಸಂತಸದ ಸಂಗತಿ ಎಂದರು.

ಬಡವರ ಕ್ಯಾಂಟೀನ್: ಪ್ರಸ್ತುತ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಅಕ್ಷರಶಃ ಬಡವರಿಗಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಅತ್ಯಂತ ಕಡಿಮೆ ದರದಲ್ಲಿ ಊಟ ಉಪಾಹಾರ ಹಾಗೂ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಬಹುತೇಕ ಬಡವರು ಇದನ್ನೇ ನೆಚ್ಚಿ ತಮ್ಮ ದಿನ ನಿತ್ಯ ಊಟ ಉಪಚಾರದ ನಿರ್ವಹಣೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ, ಉಪಾಧ್ಯಕ್ಷ ಸುಭಾಸ್ ಮಾಳಗಿ, ಸ್ಥಾಯಿ ಸಮಿತಿ ಚೇರಮನ್ ಚಂದ್ರಣ್ಣ ಶೆಟ್ಟರ, ಸದಸ್ಯರಾದ ರಫೀಕ್ ಮುದ್ಗಲ್, ಮಾಜಿ ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ನಜೀರ ಅಹ್ಮದ ಶೇಖ್, ಮುಖಂಡರಾದ ದಾನಪ್ಪ ಚೂರಿ, ವೀರನಗೌಡ ಪಾಟೀಲ, ರಮೇಶ ಸುತ್ತಕೋಟಿ, ಖಾದರಸಾಬ್ ದೊಡ್ಮನಿ, ಹನುಮಂತ ಬಮ್ಮಲಾಪೂರ, ಗಿರೀಶ ಇಂಡಿಮಠ, ಸುಶೀಲಾ ಲಮಾಣಿ, ಮಾರುತಿ ಅಚ್ಚಿಗೇರಿ, ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಫೀರೋಜ್ ಶಾ ಸೋಮನಕಟ್ಟಿ, ಮುಖ್ಯಾಧಿಕಾರಿ ವಿನಯಕುಮಾರ ಸೇರಿದಂತೆ ಇತರಿದ್ದರು.