ಸಾರಾಂಶ
- ಬೀರೂರಲ್ಲಿ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ । ಪಟ್ಟಣಕ್ಕೆ ಹೊಸ ದಿಕ್ಸೂಚಿ ನೀಡುವೆ
ಕನ್ನಡಪ್ರಭ ವಾರ್ತೆ, ಬೀರೂರುಪ್ರತಿಯೊಬ್ಬರಿಗೂ ಆಹಾರ ಅತಿ ಮುಖ್ಯ. ಹಾಗಾಗಿ ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಹಸಿದ ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಂಟೀನ್ ವರದಾನವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರ ರಸ್ತೆಯಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಹಸಿವು ನೀಗಿಸುವುದಷ್ಟೆ ಆ ಕ್ಷಣಕ್ಕೆ ಮುಖ್ಯ, ಈ ಹಸಿವಿನ ಮಹತ್ವ ಎಂತದ್ದು ಎಂದು ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆವರು ಸುರಿಸಿ ದುಡಿಯುವ ಕಾರ್ಮಿಕರಿಗೆ ಈ ಯೋಜನೆ ಜಾರಿಗೆ ತಂದಿದ್ದು ಅಸಂಘಟಿತ ಕಾರ್ಮಿಕರು, ಬಡ ಬಗ್ಗರಿಗೆ ಕಡಿಮೆ ದರದಲ್ಲಿ ವಿವಿಧ ಬಗೆ ಉಪಹಾರ- ಊಟ ಸಾರ್ವಜನಿಕರಿಗೆ ಲಭ್ಯವಿದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿ ಗಳು ಮತ್ತು ಮಹಿಳೆಯರು ಇಂದಿರಾ ಕ್ಯಾಂಟೀನ್ ಪ್ರಯೋಜನ ಪಡೆಯಬೇಕು. ಕೇವಲ ₹5 ರುಗೆ ಉಪಹಾರ ಮತ್ತು ₹10 ರು.ಗೆ ಗುಣಮಟ್ಟದ ಆಹಾರ ದೊರೆಯಲಿದೆ ಎಂದರು.ಜನರ ಬದುಕಿನ ಸುಧಾರಣೆಗೆ ಸಿದ್ದರಾಮಯ್ಯ ತಂದಿರುವ ಪಂಚ ಗ್ಯಾರಂಟಿಯಲ್ಲಿ ಪ್ರಯೋಜನ ಪಡೆಯುತ್ತಿ ರುವವರು ಉಳ್ಳವರೇ. ಯಾರು ಸಹ ಗ್ಯಾರಂಟಿ ಯೋಜನೆ ತಿರಸ್ಕಾರ ಮಾಡಿಲ್ಲ. ಆದರೆ ವಿರೋಧ ಪಕ್ಷದವರು ಸರ್ಕಾರದ ಅಭಿವೃದ್ಧಿ ಯಲ್ಲಿ ಕುಂಟಿತವಾಗಿದೆ ಎಂದು ಟೀಕಿಸುತ್ತಾರೆ. ಜನ ಇವುಗಳನ್ನು ಒಪ್ಪಿರುವುದನ್ನು ತಡೆಯಲಾರದೇ ಈ ರೀತಿ ಟೀಕಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.ಈ ಹಿಂದಿನ ರಾಜ್ಯ ಸರ್ಕಾರದಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿರಲಿಲ್ಲ. ಆದರೂ ಕೈಗೆತ್ತಿಕೊಂಡ ಅಭಿವೃದ್ಧಿ ಕೆಲಸವನ್ನು ಏಕೆ ಮಾಡಲಾಗಲಿಲ್ಲ. ಇದು ಜನರಿಗೆ ಅರ್ಥವಾಗಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹60 ಸಾವಿರ ಕೋಟಿ ವ್ಯಯಿಸಿ ಬಡವರ ಪರವಾಗಿದೆ. ಆದರೆ ಕೇಂದ್ರ ಸರ್ಕಾರ ಕಾರ್ಪೋರೇಟ್ ವಲಯಕ್ಕೆ ₹16 ಸಾವಿರ ಕೋಟಿ ಮನ್ನಾ ಮಾಡಿ ಶ್ರೀಮಂತರ ಪರವಾಗಿರುವುದು ನಮ್ಮ ದುರ್ಧೈವ. ಅದನ್ನು ಜನರೇ ತೀರ್ಮಾನಿಸಬೇಕು ಎಂದರು.ಹಲವು ವರ್ಷಗಳಿಂದ ನಿವೇಶನ ರಹಿತರಿಗೆ ನಿವೇಶನ ನೀಡಿಲ್ಲ ಎಂಬ ಆರೋಪವಿದೆ. ಆದರೆ ನೆನೆಗುದಿಗೆ ಬಿದ್ದಿರುವ ಎಸ್.ಆರ್. ಲಕ್ಷ್ಮಯ್ಯ ಬಡಾವಣೆಯಲ್ಲಿ ರಾಷ್ಟ್ರೀಯ ಬೈಪಾಸ್ ರಸ್ತೆ ಹಾದು 3 ಭಾಗವಾಗಿದೆ. ಹೊಸದಾಗಿ ಜಮೀನು ಖರೀದಿಸಿ ನಿವೇಶನ ಹಂಚಲು ಮುಂದಿನ ದಿನಗಳಲ್ಲಿ ಚರ್ಚಿಸಿ, ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದರು.ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಪುರಸಭಾ ಸದಸ್ಯರು ಮತ್ತು ಸಾರ್ವಜನಿಕ ಮನವಿಯಂತೆ ಪಟ್ಟಣದಲ್ಲಿ ದ್ವಿಪಥ ನಿರ್ಮಿಸಲು ಒತ್ತಾಯಿಸಿದ್ದು, ಅದಕ್ಕೆ ಈಗಾಗಲೇ ಸರ್ವೇ ಮಾಡಿ, ಅಂದಾಜು ₹30ಕೋಟಿ ವೆಚ್ಚವಾಗುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮ ಅವಧಿ ಮುಗಿವ ಒಳಗೆ ಈ ಕಾರ್ಯ ಉದ್ಘಾಟಿಸುವ ಭರವಸೆ ನೀಡಿದರು.ಪಟ್ಟಣದಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂಬ ಸದಸ್ಯರ ದೂರಿಗೆ ಶಾಸಕ ಆನಂದ್, ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿಗಳಿಂದ ₹407ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕೆರೆ ತುಂಬಿಸುವ ಯೋಜನೆ ಯಡಿ ಬೀರೂರಿನ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್ ಮಾತನಾಡಿ, ಬಡವರ ಕನಸಿನ ಕೂಸಾಗಿದ್ದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಹಲವು ಸಮಸ್ಯೆ ಎದುರಾಗಿದ್ದವು. ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಅವುಗಳನ್ನು ಬಗೆಹರಿಸಿ ಇಂದು ಲೋಕಾರ್ಪಣೆ ಯಾಗಿದೆ ಎಂದರು.ಪುರಸಭೆ ಉಪಾಧ್ಯಕ್ಷ ಎನ್.ಎಂ ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯ ಬಿ.ಕೆ.ಶಶಿಧರ್, ಜಿಮ್ ರಾಜು, ಬಿ.ಟಿ. ಚಂದ್ರಶೇಖರ್, ಜಿಲ್ಲಾ ಯುವಜನ ಕೋಶಾಭಿವೃದ್ಧಿ ನಿರ್ದೇಶಕ ಗೋಪಾಲ್ ಜಾದವ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಸದಸ್ಯರಾದ ರವಿಕುಮಾರ್, ಮಾನಿಕ್ ಭಾಷ, ವೃತ್ತ ನಿರೀಕ್ಷಕ ಶ್ರೀಕಾಂತ್ , ಪುರಸಭೆ ಮಾಜಿ ಅಧ್ಯಕ್ಷೆ ವನಿತಾಮಧು ಸೇರಿದಂತೆ ಮತ್ತಿತರ ಸದಸ್ಯರು ಪುರಸಭೆ ಸಿಬ್ಬಂದಿ, ವಿವಿಧ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಇದ್ದರು. -- ಬಾಕ್ಸ್--ರಾಜ್ಯ ಸರ್ಕಾರದಿಂದಲೇ ಡಿಡಿ ಮನೆ ನಿರ್ಮಾಣಬೀರೂರು ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ 300 ಡಿಡಿ ಮನೆ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಕೈಗೆತ್ತಿಕೊಂಡ ಕಾರ್ಯವನ್ನು ಮಂಡಳಿಯವರು ಸರಿಯಾಗಿ ನಿರ್ವಹಿಸದ ಪರಿಣಾಮ ರಾಜ್ಯ ಸರ್ಕಾರಕ್ಕೆ ಹಲವು ಶಾಸಕರು ಸಮಸ್ಯೆ ಬಗೆಹರಿಸಲು ಕೋರಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದಿಂದಲೇ ಮನೆ ನಿರ್ಮಾಣಕ್ಕೆ ₹6.5ಲಕ್ಷ ಗಳನ್ನು ತುಂಬುತ್ತದೆ. ಇದಕ್ಕೆ ಈ ಹಿಂದೆ ಪರಿಶಿಷ್ಟರು ಕಟ್ಟಿದ್ದ ಡಿಡಿ ಹಣ ₹64.500ಕ್ಕೆ ಉಳಿದ ಹಣ ಸೇರಿಸಿ ₹1ಲಕ್ಷದ ಡಿಡಿ ತೆಗೆದರೆ ಸರ್ಕಾರವೇ ಮನೆ ನಿರ್ಮಾಣ ಮಾಡಿಕೊಡಲಿದೆ. ಇದನ್ನು ಪುರಸಭೆ ಮುಖ್ಯಾಧಿಕಾರಿ ಹಣ ಕಟ್ಟಿದವರಿಗೆ ಕರೆದು ಮನವರಿಕೆ ಮಾಡಿ ಎಂದರು.ಕಂಚಿನ ಅಂಬೇಡ್ಕರ್ ಪ್ರತಿಮೆ ನಿರ್ಮಾಣ:ಮಾಹಾತ್ಮ ಗಾಂಧಿ ವೃತ್ತದ ಸಮೀಪ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಪುರಸಭೆಯವರು ನಿರ್ಧರಿಸಿರುವ ಜಾಗದಲ್ಲಿ ಶಾಸಕರ ಅನುದಾನಲ್ಲಿ ಸಂಪೂರ್ಣ ಕಾಮಗಾರಿ ನಡೆಸಲು ನಿರ್ಧರಿಸಿದೆ. ಶೀಘ್ರ ಭೂಮಿ ಪೂಜೆಗೆ ವ್ಯವಸ್ಥೆ ಮಾಡಿ ಅದನ್ನು ಸಹ ಮುಂದಿನ ದಿನಗಳಲ್ಲಿ ಲೋಕಾರ್ಪಣೆ ಗೊಳಿಸಲಾಗುವುದು. 16 ಬೀರೂರು 1ಬೀರೂರು ಪ್ರವಾಸಿ ಮಂದಿರ ರಸ್ತೆಯಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್ ನ್ನು ಶಾಸಕ ಕೆ.ಎಸ್.ಆನಂದ್ ಲೋಕಾರ್ಪಣೆ ಗೊಳಿಸಿದರು. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಮೋಹನ್, ಜಿಲ್ಲಾಯುವಜನ ಕೋಶಾಭಿವೃದ್ಧಿ ನಿರ್ದೇಶಕ ಗೋಪಾಲ್ ಜಾದವ್, ಮುಖ್ಯಾಧಿಕಾರಿ ಜಿ.ಪ್ರಕಾಶ್, ಬಿ.ಕೆ.ಶಶಿಧರ್ ಸೇರಿದಂತೆ ಮತ್ತಿತರರು ಇದ್ದರು.16 ಬೀರೂರು 2ಬೀರೂರು ಪ್ರವಾಸಿ ಮಂದಿರ ರಸ್ತೆಯಲ್ಲಿ ಶನಿವಾರ ಆರಂಭಗೊಂಡ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಪಡೆಯಲು ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿರುವುದು.