ಸಾರಾಂಶ
ಗಜೇಂದ್ರಗಡ: ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಒಂದಾಗಿದ್ದು, ಸಮಾಜದ ಎಲ್ಲ ವರ್ಗದ ಜನತೆಗೆ ಇಂದಿರಾ ಕ್ಯಾಂಟೀನ್ ವರದಾನವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಅಂದಾಜು ₹೮೭ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟಿನ್‌ಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಶಿಕ್ಷಣ, ವ್ಯಾಪಾರ ವಹಿವಾಟಿಗಾಗಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನತೆ ಮತ್ತು ನೆರೆಯ ತಾಲೂಕಿನಿಂದ ಆಗಮಿಸುವ ಸಾವಿರಾರು ಜನರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಲಿದೆ. ಎಲ್ಲವು ದುಬಾರಿ ಎನ್ನುವ ಕಾಲದಲ್ಲಿ ಸರ್ಕಾರ ಬಡವರ, ವಿದ್ಯಾರ್ಥಿಗಳ, ರೋಗಿಗಳ ಹಾಗೂ ಬೀದಿ ಬದಿ ವ್ಯಾಪಾರಿಗಳು ಸೇರಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಜನರಿಗೆ ನೆರವಾಗುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರವು ಪ್ರತಿ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸುತ್ತಿದೆ ಎಂದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಕಾಂಗ್ರೆಸ್ ಸರ್ಕಾರವು ಮಹಿಳೆಯರ, ವಿದ್ಯಾರ್ಥಿ, ಯುವ ಸಮೂಹ ಸೇರಿದಂತೆ ಸಮಾಜದಲ್ಲಿ ಎಲ್ಲ ವರ್ಗಗಳ ಹಿತ ಕಾಪಾಡುವ ದೆಸೆಯಲ್ಲಿ ಕಲ್ಯಾಣ ಕಾರ್ಯಕ್ರಮ ಜಾರಿಗೆ ತರುತ್ತಿದೆ. ಆದರೆ ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಸಹಿಸಿಕೊಳ್ಳಲಾಗದೆ ಸುಳ್ಳು ಆರೋಪಗಳ ಮೂಲಕ ಜನರ ದಿಕ್ಕು ತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ. ಆದರೆ ದೇಶ ಹಾಗೂ ರಾಜ್ಯದ ಜನತೆ ಕಾಂಗ್ರೆಸ್ ಪರವಾಗಿದ್ದಾರೆ. ವಿಪಕ್ಷಗಳ ಆರೋಪವನ್ನು ತೀರಸ್ಕರಿಸಿ ಜನಪರ, ರೈತಪರ ಹಾಗೂ ಕಲ್ಯಾಣ ಕಾರ್ಯಕ್ರಮ ಜಾರಿಗೆಗೊಳಿಸುವುದರ ಜತೆಗ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕಾಂಗ್ರೆಸ್ ಸರ್ಕಾರವು ಸಾಗಿಸಲಿದೆ ಎಂದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್, ದ್ರಾಕ್ಷಾಯಿಣಿ ಚೋಳಿನ, ರಫೀಕ್ ತೋರಗಲ್, ಉಮೇಶ ರಾಠೋಡ, ವೆಂಕಟೇಶ ಮುದಗಲ್, ಮುದಿಯಪ್ಪ ಮುಧೋಳ, ಮುಖಂಡರಾದ ಸಿದ್ದಪ್ಪ ಬಂಡಿ, ಅಶೋಕ ಬಾಗಮಾರ, ಶ್ರೀಧರ ಬಿದರಳ್ಳಿ, ದುರಗಪ್ಪ ಮುಧೋಳ, ಅರಿಹಂತ ಬಾಗಮಾರ ಶರಣಪ್ಪ ಚಳಗೇರಿ, ಸಿದ್ದಪ್ಪ ಚೋಳಿನ ಸೇರಿ ಇತರರು ಇದ್ದರು.