ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್!

| Published : Jan 19 2025, 02:17 AM IST

ಸಾರಾಂಶ

ಪಟ್ಟಣದ ಅತಿ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಶಿಗ್ಲಿ ಕ್ರಾಸ್ ಹತ್ತಿರ ಇಂದಿರಾ ಕ್ಯಾಂಟೀನ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ.

ಅಶೋಕ ಸೊರಟೂರ ಲಕ್ಷ್ಮೇಶ್ವರ

ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಯಾವೊಬ್ಬ ಬಡವರು ಹಸಿವಿನಿಂದ ಮಲಗಬಾರದು ಎನ್ನುವ ಸದ್ದುದ್ದೇಶದಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ಗಳಿಗೆ ಕಳೆದ ಅವಧಿಯಲ್ಲಿಯೇ ಚಾಲನೆ ನೀಡಿದ್ದರು. ಇದು ಬಡವರ ದೀನ-ದಲಿತರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದು ಇತಿಹಾಸ.

ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ಪುರಸಭೆಯ ಬಯಲು ಜಾಗದಲ್ಲಿ ಲಕ್ಷಾಂತರ ವೆಚ್ಚದಲ್ಲಿ ಸುಸಜ್ಜಿತ ಇಂದಿರಾ ಕ್ಯಾಂಟೀನ ನಿರ್ಮಾಣ ಮಾಡುವ ಸಲುವಾಗಿ ಅವಕಾಶ ನೀಡಿತ್ತು. ಈ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು ಅರ್ಧ ಕಟ್ಟಡ ಕಾಮಗಾರಿ ಮಾಡಿ ಮುಗಿಸಿದ್ದಾರೆ. ಹೀಗಾಗಿ ಈ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ಹಾಗೂ ಕುಡಕರ ತಾಣವಾಗಿರುವುದು ಕಂಡು ಬರುತ್ತಿದೆ. ಈ ಕಟ್ಟಡದ ಒಳಗಡೆ ಮದ್ಯದ ಟೆಟ್ರಾ ಪ್ಯಾಕೆಟ್‌ ಕುಡಿದು ಬಿಸಾಡಿರುವುದು ಕಂಡು ಬರುತ್ತಿವೆ. ಬಡವರ ಹಸಿವು ನೀಗಿಸಬೇಕಾದ ಕಟ್ಟಡ ಹೀಗೆ ಅನೈತಿಕತೆಯ ತಾಣವಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಪಟ್ಟಣದ ಅತಿ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಶಿಗ್ಲಿ ಕ್ರಾಸ್ ಹತ್ತಿರ ಇಂದಿರಾ ಕ್ಯಾಂಟೀನ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಬಡವರು, ಕೂಲಿ ಕಾರ್ಮಿಕರಿಗೆ ಅನನುಕೂಲವಾಗಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಡವರ ಕೈಗೆಟುಕುವ ದರದಲ್ಲಿ ಆಹಾರ ನೀಡಲಾಗುತ್ತಿದೆ. ₹5ಗಳಲ್ಲಿ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನ ಹಾಗೂ ಸಂಜೆಯ ಊಟಕ್ಕೆ ₹10ಗಳನ್ನು ನಿಗದಿ ಮಾಡಿದ್ದರಿಂದ ಬಹಳಷ್ಟು ಬಡವರಿಗೆ ಅನುಕೂಲವಾಗುತ್ತಿತ್ತು. ಆದರೆ ಯಾವ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಕಾಮಗಾರಿಗಳು ಮುಕ್ತಾಯವಾಗಿಲ್ಲ ಎಂಬುದು ಸೋಜಿಗದ ಸಂಗತಿಯಾಗಿದೆ. ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್ ತನ್ನ ಸೇವೆ ಆರಂಭಿಸುವ ಮೂಲಕ ಬಡವರ ಹಸಿವು ನೀಗಿಸುವ ಕಾರ್ಯ ಮಾಡಬೇಕು ಎಂದು ಹಿರಿಯ ಮುಖಂಡ ಪೂರ್ಣಾಜಿ ಖರಾಟೆ ಆಗ್ರಹಿಸಿದ್ದಾರೆ.

ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ ಕಟ್ಟಡದ ಕಾಮಗಾರಿಗಳು ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿವೆ. ಬಾಗಿಲು ಹಾಗೂ ಕಿಟಕಿಯ ಚೌಕಟ್ಟು ಹಚ್ಚುವುದು. ಇಲೆಕ್ಟ್ರಿಕಲ್ ಕಾಮಗಾರಿ ಬಾಕಿ ಇವೆ. ಬೆಂಗಳೂರು ಮೂಲದ ಕಂಪನಿಯು ಕಟ್ಟಡ ನಿರ್ಮಾಣದ ಕಾಮಗಾರಿಯ ಗುತ್ತಿಗೆ ತೆಗೆದುಕೊಂಡಿದ್ದು, ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಕ್ಯಾಂಟೀನ್ ಆರಂಭಿಸುವಂತೆ ಗುತ್ತಿಗೆದಾರರಿಗೆ ಈಗಾಗಲೆ ಸೂಚನೆ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ತಿಳಿಸಿದ್ದಾರೆ.