ಸಾರಾಂಶ
ಅಣ್ಣಿಗೇರಿ ಪಟ್ಟಣದ ಪುರಸಭೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಬಳಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಅಣ್ಣಿಗೇರಿ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ಶೀಘ್ರವೇ ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.ಪಟ್ಟಣದ ಪುರಸಭೆ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಬಳಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸುಮಾರು ₹87 ಲಕ್ಷ ಅನುದಾನದಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್ ಬಡವರ, ಜನಸಾಮಾನ್ಯರ ಹಸಿವು ಮುಕ್ತವಾಗಲು ಸಹಕಾರಿಯಾಗಲಿದೆ. ಈಗಾಗಲೇ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಚಕ್ಕಡಿ ರಸ್ತೆ ನಿರ್ಮಾಣ ರೈತರಿಗೆ ಹೆಚ್ಚಿನ ಅನಕೂಲವಾಗಿದೆ.ಕ್ಷೇತ್ರವಾರು ಎಚ್.ಎಫ್.ಸಿ. ಅನುದಾನ ₹3 ಕೋಟಿ ವೆಚ್ಚದ ಕಾಮಗಾರಿ ಕೂಡಲೇ ಪ್ರಾರಂಭವಾಗಲಿದೆ. ಬರುವ ದಿನಗಳಲ್ಲಿ ಪಟ್ಟಣಕ್ಕೆ 24*7 ನೀರೊದಗಿಸುವ ಮತ್ತು ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮೆಹಬೂಬಿ ನವಲಗುಂದ, ಮಂಜುನಾಥ ಮಾಯಣ್ಣನವರ, ರೈಮಾನಸಾಬ ಹೊರಗಿನಮನಿ, ಜಯಲಕ್ಷ್ಮೀ ಜಕರಡ್ಡಿ, ಖಾದರಸಾಬ ಮುಳಗುಂದ, ತಿಪ್ಪಣ್ಣ ಕೊರವರ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರು ಸೇರಿದಂತೆ ಹಲವರಿದ್ದರು.