ಕನ್ನಡಪ್ರಭ ವಾರ್ತೆ ಕಾರವಾರ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಸರಬರಾಜಿನಲ್ಲಿ ಕೊರತೆಯಿದ್ದರೂ ಕೂಡ, ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಶುಚಿ ಮತ್ತು ರುಚಿಯಾದ ಊಟ ಮತ್ತು ಉಪಾಹಾರ ಒದಗಿಸುವ ಜಿಲ್ಲೆಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅನಿಲ ಸಿಲಿಂಡರ್‌ಗಳ ಕೊರತೆ ಕಂಡುಬರದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ನಿರಂತರವಾಗಿ ಎಂದಿನಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಒದಗಿಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ, ಶಿರಸಿ, ದಾಂಡೇಲಿ, ಭಟ್ಕಳ, ಕುಮಟಾ, ಅಂಕೋಲಾ, ಹಳಿಯಾಳ, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ ತಾಲೂಕುಗಳು ಮತ್ತು ಜಾಲಿ ಹಾಗೂ ಮಂಕಿ ಪಪಂಗಳಲ್ಲಿ ಒಟ್ಟು 13 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು, ಈ ಕ್ಯಾಂಟಿನ್‌ಗಳಿಗೆ ಕಾರವಾರ, ಶಿರಸಿ, ದಾಂಡೇಲಿಯಲ್ಲಿ ವಾರಕ್ಕೆ 6, ಭಟ್ಕಳ, ಕುಮಟಾ, ಅಂಕೋಲಾ ಮತ್ತು ಹಳಿಯಾಳದಲ್ಲಿ ವಾರಕ್ಕೆ 4 ಮತ್ತು ಇತೆರೆಡೆಗಳಲ್ಲಿ ವಾರಕ್ಕೆ 3 ಗ್ಯಾಸ್ ಸಿಲಿಂಡರ್‌ಗಳ ಅಗತ್ಯವಿದ್ದು, ಈ ಅಗತ್ಯತೆಗೆ ಅನುಗುಣವಾಗಿ ಸಂಬಂಧಪಟ್ಟ ವ್ಯಾಪ್ತಿಯ ಅನಿಲ ಸರಬರಾಜುದಾರರು ಗ್ಯಾಸ್ ಸಿಲಿಡರ್ ಸರಬರಾಜು ಮಾಡುತ್ತಿದ್ದು, ಇದುವರೆಗೂ ಈ ಕ್ಯಾಂಟೀನ್‌ಗಳಲ್ಲಿ ಅನಿಲ ಸಿಲಿಂಡರ್‌ಗಳ ಅಭಾವದ ಕುರಿತಂತೆ ಮತ್ತು ಆಹಾರ ವಿತರಣೆಯ ವ್ಯತ್ಯಯದ ಕುರಿತಂತೆ ಯಾವುದೇ ದೂರು ಸಲ್ಲಿಕೆಯಾಗಿರುವುದಿಲ್ಲ.

ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‌ಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಶಾಲೆಗಳ ಬಿಸಿಯೂಟ ವ್ಯವಸ್ಥೆ, ಅಂಗನವಾಡಿ ಮತ್ತಿತರ ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೆ ಅಡುಗೆ ಅನಿಲದ ಯಾವುದೇ ಕೊರತೆಯಾಗದಂತೆ ಅಗತ್ಯಕ್ಕೆ ಅನುಗುಣವಾಗಿ ಸಿಲಿಂಡರ್‌ಗಳನ್ನು ಒದಗಿಸಲಾಗುವುದು ಎಂದು ಅನಿಲ ಸರಬರಾಜು ಸಂಸ್ಥೆಗಳ ಅಧಿಕಾರಿಗಳು ಈಗಾಗಲೇ ಸ್ಪಷ್ಟವಾಗಿ ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗಳಿಗೆ ಈ ಹಿಂದಿನಂತೆ ಕೇಳಿದ ತಕ್ಷಣವೇ ಗ್ಯಾಸ್ ದೊರೆಯುತ್ತಿಲ್ಲ ಆದರೆ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಸಿಲಿಂಡರ್ ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಮ್ಮ ವ್ಯಾಪ್ತಿಯಲ್ಲಿ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ ಎನ್ನುತ್ತಾರೆ ಘಟ್ಟದ ಮೇಲಿನ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ವಹಣೆ ಮಾಡುತ್ತಿರುವ ರಿವಾರ್ಡ್ ಸಂಸ್ಥೆಯ ವ್ಯವಸ್ಥಾಪಕ ರಾಘವೇಂದ್ರ.


ಕರಾವಳಿ ಭಾಗದದಲ್ಲಿನ ನಮ್ಮ 9 ಕ್ಯಾಂಟೀನ್‌ಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳ ಸಮಸ್ಯೆಯಾಗಿಲ್ಲ. ಆರಂಭದ ದಿನದಲ್ಲಿ ಒಂದು ಕ್ಯಾಂಟೀನ್‌ನಲ್ಲಿ ಮಾತ್ರ ಒಂದು ದಿನ ಸಮಸ್ಯೆಯಾಗಿದ್ದು, ಅಂದು ಸೌದೆ ಒಲೆ ಮೂಲಕ ಆಹಾರ ಸಿದ್ಧಪಡಿಸಿ ವಿತರಿಸಲಾಗಿದೆ ಎನ್ನುತ್ತಾರೆ ಕರಾವಳಿ ಭಾಗದಲ್ಲಿ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ವಹಣೆ ಮಾಡುತ್ತಿರುವ ಚೆಪ್ ಟೆಕ್ ಸಂಸ್ಥೆಯ ವ್ಯವಸ್ಥಾಪಕ ರಂಜನ್ ಶೆಟ್ಟಿ.