ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣ ಮಾಡದೇ ಹೋಗಿದ್ದರೆ ಇಂದು ಬಡವರು ಬ್ಯಾಂಕ್ ಮೆಟ್ಟಿಲನ್ನು ಹತ್ತಲಾಗುತ್ತಿರಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಇಂದಿರಾಗಾಂಧಿ ಯವರ 107ನೇ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದಿರಾಗಾಂಧಿ ಈ ದೇಶದ ಹೆಮ್ಮೆಯ ಉಕ್ಕಿನ ಮಹಿಳೆ ಎಂದರು.
ತಮ್ಮ 13ನೇ ವಯಸ್ಸಿನಲ್ಲಿಯೇ ಮಹಾತ್ಮ ಗಾಂಧಿಜಿಯವರ ಜೊತೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ನೆಹರೂ ಕುಟುಂಬ ಈ ದೇಶದ ಸಂಪತ್ತಾಗಿತ್ತು. ಎಲ್ಲರೂ ಕೂಡ ದೇಶದ ಅಭಿವೃದ್ಧಿಗಾಗಿಯೇ ಶ್ರಮಿಸಿ ದೇಶದಕ್ಕಾಗಿ ಪ್ರಾಣಕೊಟ್ಟರು ಎಂದು ಹೇಳಿದರು.ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಇಂದಿರಾಗಾಂಧಿಯವರು ಸೋತಾಗ ಅವರಿಗೆ ಮರು ಜೀವ ಕೊಟ್ಟಿದ್ದು ಕರ್ನಾಟಕ. ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿದಾಗ ಶಿವಮೊಗ್ಗದ ಅಂದಿನ ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡಲು ಹೋಗಿದ್ದು ನಮಗೆ ನೆನಪಿದೆ. ಇವತ್ತು ಕಾಂಗ್ರೆಸ್ ಕರ್ನಾಟಕದಲ್ಲಿ ಜೀವಂತವಾಗಿದೆ ಎಂದರೆ ಅದಕ್ಕೆ ಇಂದಿರಾಗಾಂಧಿಯವರು ಬಹುಮುಖ್ಯ ಕಾರಣ ಎಂದು ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ದೇಶಕ್ಕೆ ಕಷ್ಟ ಬಂದ ಕಾಲದಲ್ಲಿ ಇಂದಿರಾಗಾಂಧಿಯವರು ಕೈಹಿಡಿದವರು. ಸುಮಾರು 15 ವರ್ಷಗಳ ಕಾಲ ಆಡಳಿತ ನಡೆಸಿದ ಅವರು ಭಾರತದ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ತಮ್ಮ ವಿವಿಧ ಆಡಳಿತ ಕೋನಗಳಿಂದ ಉಕ್ಕಿನ ಮಹಿಳೆ ಎಂದು ಹೆಸರು ಪಡೆದವರು ಎಂದರು.ವಿರೋಧ ಪಕ್ಷದ ನಾಯಕರನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದವರು ಇಂದಿರಾಗಾಂಧಿಯವರು. ಇದನ್ನೇ ರಾಜೀವ್ ಗಾಂಧಿಯವರು ಕೂಡ ಮುಂದುವರೆಸಿದರು. ಬಿಜೆಪಿ ನಾಯಕ ವಾಜಪೇಯಿಯವರ ಆರೋಗ್ಯದ ವಿಚಾರಕ್ಕೆ ಬಂದಾಗ ಹೊರದೇಶದಲ್ಲಿ ಚಿಕಿತ್ಸೆ ಕೊಡಿಸಿದರು. ಹಾಗಾಗಿ ನೆಹರೂ ಕುಟುಂಬ ಈ ದೇಶದ ಪ್ರಗತಿಗಾಗಿಯೇ ಶ್ರಮಿಸಿದವರು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಇಂದಿರಾಗಾಂಧಿಯವರು ತಮ್ಮ 20 ಅಂಶದ ಕಾರ್ಯಕ್ರಮಗಳ ಮೂಲಕ ದೇಶದ ಗಮನ ಸೆಳೆದವರು. ಇಂದು ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದು ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದರೆ ಅವು ಇಂದಿರಾಗಾಂಧಿಯವರು ಕೊಟ್ಟ ಕೊಡುಗೆಗಳೇ ಆಗಿವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಎಸ್.ಟಿ. ಹಾಲಪ್ಪ, ಎಚ್.ಎಂ.ಚಂದ್ರಶೇಖರಪ್ಪ, ಇಸ್ಮಾಯಿಲ್ ಖಾನ್, ವೈ.ಎಚ್.ನಾಗರಾಜ್, ಕಲೀಂ ಪಾಶ, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಇಕ್ಕೇರಿ ರಮೇಶ್, ಎಸ್.ಪಿ. ಶೇಷಾದ್ರಿ, ಮಂಜುನಾಥ್ ಬಾಬು, ವಿಜಯಲಕ್ಷ್ಮಿ ಪಾಟೀಲ್, ಭಾರತಿ ರಾಮಕೃಷ್ಣ, ಸ್ಟೆಲಾ ಮಾರ್ಟಿನ್, ನಾಜೀಮಾ, ಕವಿತಾ, ಅರ್ಚನಾ, ಶಿವಣ್ಣ, ಶಿವಾನಂದ್ ಮತ್ತಿತರರು ಇದ್ದರು.