ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು ಸರ್ಕಾರದ ಸಾಧನಾ ಸಮಾವೇಶ ನಡೆಯುತ್ತಿರುವ ಹಿನ್ನೆಲೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾಷಣ ಮಾಡಿದ್ದ ಇದೇ ಮೈದಾನದ ಕಟ್ಟೆಗೆ ಈಗ ಹೊಸ ರೂಪ ನೀಡಲಾಗುತ್ತಿದ್ದು, ಅಮೃತ ಶಿಲೆಯಲ್ಲಿ ಇಂದಿರಾ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ.ಇಂದಿರಾ ಗಾಂಧಿ ಅವರು 80ರ ದಶಕದಲ್ಲಿ ಈ ಕ್ರೀಡಾಂಗಣದಲ್ಲಿ ಭಾಷಣ ಮಾಡಿದ್ದರು. ಅವರು ಭಾಷಣ ಮಾಡಿದ ಕಟ್ಟೆಗೆ ಇಂದಿರಾ ಗಾಂಧಿ ಕಟ್ಟೆ ಎಂದೇ ಕರೆಯಲಾಗುತ್ತಿತ್ತು. ಈ ಕಟ್ಟೆಯಲ್ಲಿ ಸೋನಿಯಾ ಗಾಂಧಿ ಅವರು ಕೂಡ ಭಾಷಣ ಮಾಡಿದ್ದಾರೆ. ಈ ಕಟ್ಟೆಯನ್ನು ಸಂರಕ್ಷಿಸಬೇಕು ಎಂದು ಕಾಂಗ್ರೆಸ್ ಮುಖಂಡ ಬಣ್ಣದಮನೆ ಸೋಮಶೇಖರ ಒತ್ತಾಯಿಸಿದ್ದರು. ಇವರ ಮನವಿಗೆ ಸ್ಪಂದಿಸಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ಅವರು ಅಭಿವೃದ್ಧಿಪಡಿಸುತ್ತಿದ್ದಾರೆ. ಹೊಸಪೇಟೆ ನಗರದಲ್ಲಿ ಮೇ 20 ರಂದು ಜರುಗಲಿರುವ ಸಾಧನಾ ಸಮಾವೇಶ ಸಮಾರಂಭದ ಪೂರ್ವಸಿದ್ಧತೆ ಪರಿಶೀಲಿಸಲು ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸಪೇಟೆಗೆ ಆಗಮಿಸುವರು. ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮನ ಹಿನ್ನೆಲೆ ಖುದ್ದಾಗಿ ಮೇ 16ರಂದು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ರಸ್ತೆ ಮೂಲಕ ವಾಹನದಲ್ಲಿ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣಕ್ಕೆ ಬೆ.11:30 ಗಂಟೆಗೆ ಭೇಟಿ ನೀಡಿ ಪೂರ್ವ ಸಿದ್ಧತೆಗಳ ಪರಿಶೀಲಿಸಲಿದ್ದಾರೆ. ಬಳಿಕ 1.30 ಕ್ಕೆ ಕೊಪ್ಪಳದ ಗಿಣಿಗೇರಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ತೆರಳುವರು.ಡಿಕೆಶಿ ಪ್ರವಾಸ:ಮೇ 16ರಂದು ಹೊಸಪೇಟೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಿ ಹೊಸಪೇಟೆ ನಗರದಲ್ಲಿ ಮೇ 20 ರಂದು ಜರುಗಲಿರುವ ಸಾಧನಾ ಸಮಾವೇಶ ಸಮಾರಂಭದ ಪೂರ್ವಸಿದ್ಧತೆ ಪರಿಶೀಲಿಸಲು ಮೇ16 ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಮಿಸಲಿದ್ದಾರೆ. ಮೇ 16ರಂದು ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ರಸ್ತೆ ಮೂಲಕ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣಕ್ಕೆ ಬೆ.11ಗಂಟೆಗೆ ಭೇಟಿ ನೀಡಿ ಪೂರ್ವ ಸಿದ್ದತೆಗಳ ಕುರಿತು ಚರ್ಚಿಸಲಿದ್ದಾರೆ. ಬಳಿಕ 2.30ಕ್ಕೆ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು. ಸಚಿವರ ಪರಿಶೀಲನೆ:
ಸಾಧನಾ ಸಮಾವೇಶದ ವೇದಿಕೆ ನಿರ್ಮಾಣ ಕಾಮಗಾರಿಯನ್ನು ಸಚಿವ ಜಮೀರ್ ಅಹಮದ್ ಖಾನ್ ಪರಿಶೀಲಿಸಿದರು.ಶಾಸಕರಾದ ಬಿ. ನಾಗೇಂದ್ರ, ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಸಿರಾಜ್ ಶೇಕ್, ಜಿಲ್ಲಾಧಿಕಾರಿ ದಿವಾಕರ್, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಶ್ರೀಹರಿಬಾಬು ಮತ್ತಿತರರಿದ್ದರು.