ಬಡವರು, ದಮನಿತರ ಧ್ವನಿಯಾಗಿದ್ದ ಇಂದಿರಾ ಗಾಂಧಿ: ರೈ

| Published : Nov 01 2024, 12:11 AM IST

ಸಾರಾಂಶ

ಇಂದಿರಾ ಗಾಂಧಿ ಅವರು ದೇಶದ ಸಾಮಾಜಿಕ ಸಾಮರಸ್ಯ ಉಳಿವಿಗಾಗಿ ಮತೀಯ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡಿದವರು. ದೇಶದ ಏಕತೆಯ ದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದರು. ಸಾಮಾಜಿಕ ನ್ಯಾಯದಿಂದ ವಂಚಿತರಾದ ಬಡವರು, ಶೋಷಿತರು, ದಮನಿತರಿಗೆ ಧ್ವನಿಯಾದವರು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಇಂದಿರಾ ಗಾಂಧಿ ಅವರು ದೇಶದ ಸಾಮಾಜಿಕ ಸಾಮರಸ್ಯ ಉಳಿವಿಗಾಗಿ ಮತೀಯ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡಿದವರು. ದೇಶದ ಏಕತೆಯ ದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ಸ್ಮರಿಸಿದರು.ರಾಜ್ಯಸಭೆ ಮಾಜಿ ಸದಸ್ಯ ಬಿ.ಇಬ್ರಾಹಿಂ ಮಾತನಾಡಿ, ಇಂದಿರಾ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ತರ. ಬಡಜನರ ಬಗೆಗಿನ ಕಾಳಜಿ, ದೇಶದ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಇಂದಿರಾ ಗಾಂಧಿ ಅವರಿಂದ ಕರ್ನಾಟಕಲ್ಲಿ ಕಾಂಗ್ರೆಸ್ ಬಲ ವೃದ್ಧಿಯಾಯಿತು. ಅವರ ಕೊಡುಗೆಯನ್ನು ಇಂದಿಗೂ ಜನರು ಮರೆತಿಲ್ಲ. ಜನರಲ್ಲಿ ಅವರನ್ನು ನೆನಪಿಸುವ ಕಾರ್ಯ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದರು.

ಮಾಜಿ ಶಾಸಕ ಜೆ.ಆರ್. ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್‌., ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿದರು. ಮುಖಂಡರಾದ ಕೆ.ಹರಿನಾಥ್, ಕೆ.ಪಿ. ಥೋಮಸ್, ಅಬ್ದುಲ್ ರವೂಫ್, ಲ್ಯಾನ್ಸ್ ಲಾಟ್ ಪಿಂಟೊ, ಕೆ.ಅಶ್ರಫ್, ಜೆ.ಅಬ್ದುಲ್ ಸಲೀಂ, ನವೀನ್ ಡಿಸೋಜ, ಟಿ.ಹೊನ್ನಯ್ಯ, ಶುಭೋದಯ ಆಳ್ವ, ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಡಾ.ಶೇಖರ್ ಪೂಜಾರಿ, ಟಿ.ಡಿ.ವಿಕಾಸ್ ಶೆಟ್ಟಿ, ಯು.ಟಿ.ಫರ್ಝಾನ, ಕೆ.ಅಪ್ಪಿ, ಸಬಿತಾ ಮಿಸ್ಕಿತ್, ಶಬ್ಬೀರ್ ಸಿದ್ದಕಟ್ಟೆ, ಯೋಗಿಶ್ ಕದ್ರಿ, ಪ್ರೇಮ್ ಬಳ್ಳಾಲ್ ಭಾಗ್ ಮತ್ತಿತರರು ಇದ್ದರು.ಕೆ.ಕೆ.ಶಾಹುಲ್ ಹಮೀದ್ ಸ್ವಾಗತಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.