ನಿರಂಜನ್‌ಕುಮಾರ ವಿರುದ್ಧ ಪರೋಕ್ಷ ವಾಗ್ದಾಳಿ

| Published : Apr 14 2024, 01:49 AM IST

ಸಾರಾಂಶ

ಗುಂಡ್ಲುಪೇಟೆ ಕ್ಷೇತ್ರವನ್ನು ೨೦ ವರ್ಷ ಆಳುತ್ತೇವೆ ಅಂದುಕೊಂಡಿದ್ದರು ಈಗ ಅವರ ಬಂಡವಾಳ ಗೊತ್ತಾಗಿ ಕ್ಷೇತ್ರದ ಜನ ಸರಿಯಾದ ತೀರ್ಮಾನ ಕೊಟ್ಟಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಕ್ಷೇತ್ರವನ್ನು ೨೦ ವರ್ಷ ಆಳುತ್ತೇವೆ ಅಂದುಕೊಂಡಿದ್ದರು ಈಗ ಅವರ ಬಂಡವಾಳ ಗೊತ್ತಾಗಿ ಕ್ಷೇತ್ರದ ಜನ ಸರಿಯಾದ ತೀರ್ಮಾನ ಕೊಟ್ಟಿದ್ದಾರೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ಲೋಕಸಭೆ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕ್ಷೇತ್ರದ ಜನರ ತೀರ್ಮಾನ ನನಗೆ ಖುಷಿ ತಂದಿದೆ ಎಂದರು. ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಬಗ್ಗೆ ವಿಪಕ್ಷಗಳು ಅಪಪ್ರಚಾರದಲ್ಲಿ ತೊಡಗಿದ್ದಾರೆ ನನ್ನನ್ನು ಕೂಡ ಚುನಾವಣೆಗೂ ಮುನ್ನ ರಾಜಕಾರಣ ಗೊತ್ತಿಲ್ಲ. ಎಳಸು ಅಂತ ಆಡಿಕೊಂಡಿದ್ರು, ಆದ್ರೆ ಜನ ಆಡಿಕೊಂಡವರಿಗೆ ಐದು ವರ್ಷದಲ್ಲೇ ಬುದ್ದಿ ಕಲಿಸಿದರು ಎಂದು ವ್ಯಂಗವಾಡಿದರು.

ಜನರಿಗೆ ವಿಶ್ವಾಸವಿದೆ:

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳ ಬಗ್ಗೆ ರಾಜ್ಯದ ಜನರಲ್ಲಿ ವಿಶ್ವಾಸವಿದೆ. ಗ್ಯಾರಂಟಿಗಳು ಕಾಂಗ್ರೆಸ್‌ ಕೈ ಹಿಡಿಯಲಿದ್ದು ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘಟಿತರಾಗಿ ಮತದಾರರ ಬಳಿಗೆ ಹೋಗಿ ಎಂದರು. ಕೇಂದ್ರ ಸರ್ಕಾರದ ನೀತಿಯಿಂದ ಜನ ಸಾಮಾನ್ಯರು ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದರು. ಜನ ಸಾಮಾನ್ಯರ ನೆರವಿಗೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತರುವ ಮೂಲಕ ಜನರ ನೆರವಿಗೆ ಬಂದಿದೆ ಎಂದರು.

ನನಗೆ ಶಕ್ತಿ ತುಂಬಿ:

ಕ್ಷೇತ್ರದ ಮತದಾರರು ನನಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ೩೬ ಸಾವಿರಕ್ಕೂ ಹೆಚ್ಚು ಲೀಡ್‌ ನಲ್ಲಿ ಗೆಲ್ಲಿಸಿದ್ದೀರಿ. ಈ ಚುನಾವಣೆಯಲ್ಲೂ ಹೆಚ್ಚಿನ ಲೀಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಕೊಡುವ ಮೂಲಕ ನನಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಬಯಕೆ ನನ್ನದಾಗಿದ್ದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಕೆಲಸ ಲೋಕಸಭೆ ಚುನಾವಣೆ ಮುಗಿದ ಮೇಲೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಕೆ.ಎಸ್.ಮಹೇಶ್‌ ಮಾತನಾಡಿದರು.

ಪ್ರಚಾರ ಸಭೆಯಲ್ಲಿ ಗುಂಡ್ಲುಪೇಟೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್‌ಆರ್‌ಎಸ್‌ ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಆರ್.ಕುಮಾರ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎಚ್.ಬಿ.ಬಸವರಾಜಪ್ಪ, ಮುಖಂಡರಾದ ಬೆಂಡಗಳ್ಳಿ ಸ್ವಾಮಿ, ಸಿದ್ದಪ್ಪ, ರಾಜೇಶ್‌, ಹಕ್ಕಲಪುರ ನಾಗೇಶ್‌ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಕೃತಕ ನೀರಿನ ಅಭಾವ ಸೃಷ್ಠಿಸಿದ್ದ ವಿಪಕ್ಷದವರು

ಗುಂಡ್ಲುಪೇಟೆ: ಕಬಿನಿ ಕುಡಿವ ನೀರಿನ ವಿಚಾರದಲ್ಲಿ ಕೃತಕ ಅಭಾವ ಸೃಷ್ಠಿಸಿ ವಿಪಕ್ಷದವರು ನನ್ನ ಮೇಲೆ ಕೆಟ್ಟ ಹೆಸರು ತರಲು ಪ್ರಯತ್ನಿದ್ದರು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಆರೋಪಿಸಿದರು. ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ಮೈಸೂರು, ಊಟಿ ಹೆದ್ದಾರಿ ಬದಿಯ ೧೫ ಕ್ಕೂ ಹೆಚ್ಚು ಹಳ್ಳಿಗಳಿಗೆ ಸರಬರಾಜಾಗುವ ಕಬಿನಿ ನೀರು ಬರದಂತೆ ಮಾಡುವಲ್ಲಿ ಕೆಲವರು ಕೆಲ ದಿನಗಳ ಕಾಲ ಯಶಸ್ಸು ಸಾಧಿಸಿದ್ದರು ಎಂದರು. ಕಬಿನಿ ನೀರಿನ ಸಮಸ್ಯೆ ಕೃತಕ ಎಂದು ಪಟ್ಟಣದ ನಾಗರೀಕರು ತಿಳಿದು ಪ್ರತಿಭಟನೆ ಮಾಡಲಿಲ್ಲ. ಬಿಜೆಪಿ ಕೂಡ ಪ್ರತಿಭಟಿಸಲಿಲ್ಲ ಎಂದರು.