ರಾಜ್ಯದಲ್ಲಿ ಹಿಂದೂಗಳ ಮೇಲೆ ಅವ್ಯಾಹತ ಹಲ್ಲೆ: ಬಿ.ವೈ.ವಿಜಯೇಂದ್ರ

| Published : Apr 28 2024, 01:17 AM IST

ರಾಜ್ಯದಲ್ಲಿ ಹಿಂದೂಗಳ ಮೇಲೆ ಅವ್ಯಾಹತ ಹಲ್ಲೆ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಡಲ ಬಿಜೆಪಿ ಯುವಮೋರ್ಚಾದ ವತಿಯಿಂದ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಕುಶಾವತಿ ನೆಹರೂ ಪಾರ್ಕಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ತೀರ್ಥಹಳ್ಳಿ

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತುಷ್ಠೀಕರಣದಲ್ಲಿ ತೊಡಗಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಮಹಿಳೆಯರು ಮನೆಯಿಂದ ಹೊರ ಬೀಳಲು ಭಯಪಡುವಂತಹ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರ ಹೋಗುವ ಮಹಿಳೆ ಸುರಕ್ಷಿತವಾಗಿ ಮನೆಗೆ ಮರಳುವ ಭರವಸೆಯೂ ಇಲ್ಲಾ ಎಂದೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ರಾಜ್ಯದಲ್ಲಿ ಹಿಂದೂಗಳ ಮೇಲೆ ಅವ್ಯಾಹತವಾಗಿ ಹಲ್ಲೆ ನಡೆಯುತ್ತಿದ್ದು, ಸರ್ಕಾರದಿಂದ ಹಿಂದೂಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಕರ್ನಾಟಕ ದ ಮುಖ್ಯಮಂತ್ರಿಯೋ ಅಥವಾ ಕೇವಲ ಅಲ್ಪಸಂಖ್ಯಾತರ ಮುಖ್ಯಮಂತ್ರಿಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಮಂಡಲ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ಕುಶಾವತಿ ನೆಹರೂ ಪಾರ್ಕಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದ ಅಭಯ ಹಸ್ತದ ನೆರವಿನಿಂದ ಅಲ್ಪ ಸಂಖ್ಯಾತರಿಗೆ ಭಯವೇ ಇಲ್ಲದಂತಾಗಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದವರನ್ನು ಒದ್ದು ಒಳಹಾಕಬೇಕಿದ್ದ ಸರ್ಕಾರ ದೇಶದ್ರೋಹಿಗಳ ಮೇಲೆ ಕ್ರಮ ಕೈಗೊಂಡಿಲ್ಲಾ. ನೇಹಾ ಹತ್ಯೆ ಪ್ರಕರಣವನ್ನು ಹಗುರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರದ ಮುಖ್ಯ ಮಂತ್ರಿ ಈ ಘಟನೆ ವೈಯಕ್ತಿಕ ಕಾರಣಕ್ಕಾಗಿ ನಡೆದಿದೆ ಎಂದಿರುವುದು ಖಂಡನೀಯ ಎಂದೂ ಟೀಕಿಸಿದರು.

ಬಿಜೆಪಿ ಯಾವತ್ತೂ ಅಲ್ಪಸಂಖ್ಯಾತರ ವಿರೋಧಿಯಲ್ಲಾ. ಯಡಿಯೂರಪ್ಪ ಅಧಿಕಾರವಧಿಯಲ್ಲಿ 500 ಕೋಟಿ ಹಜ್ ಭವನದ ನಿರ್ಮಾಣಕ್ಕೆ ನೀಡಿದ್ದನ್ನು ಸ್ಮರಿಸ ಬೇಕಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳನ್ನು ವಂಚಿಸಲು ಮುಂದಾಗಿದೆ ಎಂದೂ ಹೇಳಿದರು.

ರಾಜ್ಯದಲ್ಲಿ ಶುಕ್ರವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿರುವ ಕ್ಷೇತ್ರಗಳನ್ನು ಕೂಡಾ ಛಿದ್ರಗೊಳಿಸಿ ಎಲ್ಲಾ 14 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಶೀಲರಾಗಲಿದ್ದಾರೆ. ಕಾಂಗ್ರೆಸ್ಸಿನ ಹಣದ ಹೊಳೆ ಮತ್ತು ಅಧಿಕಾರದ ಪ್ರಭಾವದ ನಡುವೆಯೂ ಆ ಪಕ್ಷದ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರ ಸೇರಿದಂತೆ ಮೈಸೂರು ಚಾಮರಾಜನಗರದಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಉಳಿದ 14 ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.

ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಗಳಿಗೂ ಕೊಡಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಆಡಳಿತದಲ್ಲಿ 800 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರೂ ಸಹ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ ಎಂದರು.

ಸಭೆಯಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ, ಹರೀಶ್ ಪೂಂಜಾ ಮತ್ತು ರಾಜ್ಯ ಯುವ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಧೀರಜ್ ಮುನಿರಾಜ್ ಮಾತನಾಡಿದರು. ರ್‍ಯಾಲಿಯಲ್ಲಿ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ದೇವಾಡಿಗ, ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ತಾಲೂಕು ಜೆಡಿಎಸ್ ಅಧ್ಯಕ್ಷ ಕುಣಜೆ ಕಿರಣ್, ಪ್ರಶಾಂತ್ ಕುಕ್ಕೆ ಪ್ರಶಾಂತ್, ಸಾಲೇಕೊಪ್ಪ ರಾಮಚಂದ್ರ ಮುಂತಾದವರು ಇದ್ದರು. ರಾಹುಲ್ ಭೇಟಿಯ ಬಳಿಕ ಮತ್ತೆ 50 ಸಾವಿರ ಲೀಡ್‌ ಹೆಚ್ಚಲಿದೆ: ವಿಜಯೇಂದ್ರಶಿವಮೊಗ್ಗ: ಕ್ಷೇತ್ರದಲ್ಲಿ ಎರಡೂವರೆ ಮೂರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ರಾಹುಲ್ ಗಾಂಧಿ ಭೇಟಿ ಬಳಿಕ ಮತ್ತೆ 50 ಸಾವಿರ ಲೀಡ್ ಹೆಚ್ಚಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಜನರ ವಿಶ್ವಾಸ ಕಳೆದುಕೊಂಡು ವೈಯನಾಡಿನಲ್ಲಿ ಅಡಗಿ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿಗೆ ಏಕೆ ಇಂತಹ ಪರಿಸ್ಥಿತಿ ಬಂದಿದೆ. ಅಮೇಥಿ ಮತದಾರರು ಏಕೆ ರಾಹುಲ್ ಗಾಂಧಿ ಧಿಕ್ಕರಿಸಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ರಾಹುಲ್ ಗಾಂಧಿ ರಾಜ್ಯಕ್ಕೆ ಹೆಚ್ಚೆಚ್ಚು ಕರೆಸಬೇಕು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ಒಬಿಸಿ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಮೋದಿ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಏ.26ರಂದು ಮೊದಲ ಹಂತದಲ್ಲಿ ನಡೆದ 14 ಕ್ಷೇತ್ರಗಳ ಚುನಾವಣೆ ನಿರೀಕ್ಷೆಗೆ ಮೀರಿ ಚೆನ್ನಾಗಿ ಆಗಿದೆ. 14 ಕ್ಕೆ 14 ಸ್ಥಾನ ಗೆಲ್ಲುತ್ತೇವೆ. ಏ.28ರಂದು ದಾವಣಗೆರೆ ಹೊಸಪೇಟೆಯಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.ರಾಜ್ಯದಲ್ಲಿ ಪೆನ್ ಡ್ರೈವ್ ಹೆಚ್ಚು ಸದ್ದು ವಿಚಾರದ ಬಗ್ಗೆ ನಾನು ಮಾತನಾಡಲ್ಲ ಎಂದ ಅವರು, ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುತ್ತೇವೆ ಎಂದರು.