ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಒಕ್ಕಲಿಗರು ಒಂದು ಜಾತಿಗೆ ಸೀಮಿತವಲ್ಲ, ವಿಶ್ವಕ್ಕೆ ಅನ್ನನೀಡುವ ಭೂ ತಾಯಿಯ ಒಕ್ಕಲುತನದವರು ಎಂದು ಕೆಂಗೇರಿ ವಿಶ್ವಮಾನವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಮಹಾ ಸ್ವಾಮೀಜಿ ಹೇಳಿದರು.ನಗರದಲ್ಲಿರುವ ಕಲ್ಲಹಳ್ಳಿಯ ನಾಗಸಿರಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಜಿಲ್ಲಾ ಸಮಿತಿ ಹಾಗೂ ರಾಜ್ಯ ಒಕ್ಕಲಿಗ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಹಬ್ಬ ಹಾಗೂ ಭೈರವೈಕ್ಯ ಯುಗಯೋಗಿ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ೮೦ನೇ ವರ್ಷದ ಜಯಂತೋತ್ಸವದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿ ಮಾತನಾಡಿದರು.
ವಿಶ್ವದಲ್ಲಿ ಒಕ್ಕಲುತನ ಮಾಡುವವರು ಎಲ್ಲಾ ಸಮುದಾಯಗಳನ್ನು ಪೋಷಿಸುತ್ತಿದ್ದಾರೆ. ತಾವು ಬೆಳೆದ ದವಸ-ಧಾನ್ಯಗಳನ್ನು ಇತರರಿಗೂ ಹಂಚುತ್ತಿದ್ದಾರೆ. ಅಂದಿನ ಕಾಲದಲ್ಲಿ ಕೃಷಿಕರು ಸುಗ್ಗಿಹಬ್ಬದಲ್ಲಿ ಎಲ್ಲರಿಗೂ ಒಕ್ಕಣೆ ಕಣದಲ್ಲಿ ರಾಗಿ-ಭತ್ತ ದಾನ ಮಾಡುತ್ತಿದ್ದರು, ಎಲ್ಲರಿಗೂ ಆಶ್ರಯದಾತರಂತೆ ಸಂಭ್ರಮಿಸುತ್ತಿದ್ದರು ಎಂದು ಸ್ಮರಿಸಿದರು.ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಬೆಳೆದಂತೆ ಎಲ್ಲವೂ ಬದಲಾಗಿವೆ. ಬದಲಾಗುವಂತೆ ಮಾಡಿವೆ. ರೈತರು ತಮ್ಮ ಮಕ್ಕಳಿಗೆ ಮಂತ್ರಮಾಂಗಲ್ಯ ಮದುವೆ ಮಾಡುವುದಕ್ಕೆ ಮುಂದಾಗಬೇಕು. ಅದ್ಧೂರಿ, ಆಡಂಬರದ ಮದುವೆಗಳಿಂದ ದೂರ ಉಳಿಯಬೇಕು. ಒಕ್ಕಲಿಗರ ಸೇವಾ ಟ್ರಸ್ಟ್ ಮತ್ತು ಸಂಘಗಳು ಮತ್ತೆ ಮಂತ್ರಮಾಂಗಲ್ಯ ಮದುವೆ ಬಗ್ಗೆ ಹೆಚ್ಚು ಅರಿವು ಮೂಡಿಬೇಕಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಭೈರವೈಕ್ಯ ಯುಗಯೋಗಿ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ೮೦ನೇ ವರ್ಷದ ಜಯಂತೋತ್ಸವ ಪ್ರಯುಕ್ತ ಭಾವಚಿತ್ರಕ್ಕೆ ಭಕ್ತಪೂರ್ವಕ ನಮನ ಸಲ್ಲಿಸಿ ಸ್ಮರಿಸಿದರು. ರಾಗಿ-ಭತ್ತ, ಬೆಲ್ಲ ತೆಂಗಿನಕಾಯಿ ರಾಶಿ ನಿರ್ಮಿಸಿ ಸಂಕ್ರಾಂತಿ ಪೂಜೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೊಸಹಳ್ಳಿ ಶಿವಲಿಂಗೇಗೌಡ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ, ರಾಜ್ಯ ಗೌರವಾಧ್ಯಕ್ಷೆ ಜ್ಯೋತಿಲಕ್ಷ್ಮಿ ನಾಗಣ್ಣ, ಮಹಿಳಾ ಘಟಕ ಅಧ್ಯಕ್ಷೆ ಸಿ.ಜೆ.ಸುಜಾತ ಕೃಷ್ಣ, ರಾಜ್ಯ ಕಾರ್ಯಾಧ್ಯಕ್ಷ ನ.ಲಿ.ಕೃಷ್ಣ, ರಾಜ್ಯ ಉಪಾಧ್ಯಕ್ಷ ಎನ್.ಕೃಷ್ಣ, ರಾಜ್ಯ ಸಂಚಾಲಕ ಬಿ.ಆರ್.ಕೃಷ್ಣೆಗೌಡ, ಜಿಲ್ಲಾ ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ತಮ್ಮಯ್ಯ, ಬಿಳಿ ದೇಗಲು ಬೋರೇಗೌಡ, ರತ್ನಮ್ಮ, ಶೋಭಾ, ಗಾಯಕ ಮಂಜುನಾಥ್ ಹಾಗೂ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷರು, ಸೇವಾ ಟ್ರಸ್ಟ್ ನ ತಾಲೂಕು ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.