ಪವರ್ ಮ್ಯಾನ್ ಗಳು ಗ್ರಾಹಕರು ಹಾಗೂ ಸೆಸ್ಕ್ ನಡುವಿನ ಸಂಪರ್ಕದ ಸೇತುವೆಯಾಗಿರುತ್ತಾರೆ. ಹೀಗಾಗಿ, ಅವರು ಗ್ರಾಹಕರೊಂದಿಗೆ ಸಂಯಮ, ಸಹನೆ, ಸೌಹಾರ್ದತೆಯಿಂದ ನಡೆದುಕೊಂಡು, ಅಡಚಣೆರಹಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ನೂತನವಾಗಿ ನೇಮಕಗೊಂಡಿರುವ ಜೂನಿಯರ್ ಪವರ್ ಮ್ಯಾನ್ ಗಳ 4ನೇ ತಂಡದವರಿಗೆ ಆರು ದಿನಗಳ ಪ್ರವೇಶಾತಿ ತರಬೇತಿಗೆ ಸೋಮವಾರ ಚಾಲನೆ ನೀಡಲಾಯಿತು.ಮೈಸೂರು ತಾಲೂಕಿನ ಕಡಕೊಳದಲ್ಲಿರುವ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿರುವ ತರಬೇತಿ ಕಾರ್ಯಕ್ರಮದಲ್ಲಿ ಮೊದಲ ದಿನ ವಿದ್ಯುತ್ ವಿತರಣಾ ವ್ಯವಸ್ಥೆ, ಟ್ರಾನ್ಸ್ ಫಾರ್ಮರ್ ನಿರ್ವಹಣೆ, ಸುರಕ್ಷತಾ ಕ್ರಮಗಳು ಹಾಗೂ ವಿದ್ಯುತ್ ಕಳ್ಳತನ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಹಾಗೂ ವಿಡಿಯೋಗಳ ಮೂಲಕ ಸಂಬಂಧಿಸಿದ ಅಧಿಕಾರಿಗಳು ತರಬೇತಿ ನೀಡಿದರು.
ಸೆಸ್ಕ್ ತರಬೇತಿ ಶಾಖೆ ಉಪ ಪ್ರಧಾನ ವ್ಯವಸ್ಥಾಪಕಿ ಎಂ.ವೈ. ಹೇಮಾ ಮಾತನಾಡಿ, ಪವರ್ ಮ್ಯಾನ್ ಗಳು ಗ್ರಾಹಕರು ಹಾಗೂ ಸೆಸ್ಕ್ ನಡುವಿನ ಸಂಪರ್ಕದ ಸೇತುವೆಯಾಗಿರುತ್ತಾರೆ. ಹೀಗಾಗಿ, ಅವರು ಗ್ರಾಹಕರೊಂದಿಗೆ ಸಂಯಮ, ಸಹನೆ, ಸೌಹಾರ್ದತೆಯಿಂದ ನಡೆದುಕೊಂಡು, ಅಡಚಣೆರಹಿತ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕಿದೆ ಎಂದರು.ಆದ್ದರಿಂದ ಕರ್ತವ್ಯದಲ್ಲಿ ಯಾವುದೇ ತಪ್ಪುಗಳು ಸಂಭವಿಸಿದಾಗ ಅದನ್ನು ಸರಿಪಡಿಸಲು ವಿಳಂಬ ಮಾಡಬಾರದು. ಅದರಲ್ಲೂ ಜೀವಕ್ಕೆ ಹಾನಿಯಾಗುವಂತಹ ತಪ್ಪು ಮಾಡದಂತೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ತಡೆರಹಿತ ವಿದ್ಯುತ್ ಒದಗಿಸುವುದು ಸೆಸ್ಕ್ ಪ್ರಮುಖ ಧ್ಯೇಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ವಿವಿಧ ಸಂಸ್ಥೆಗಳು ಹಾಗೂ ಮುಖ್ಯವಾಗಿ ಗ್ರಾಹಕರ ಸಹಕಾರದೊಂದಿಗೆ ಈ ಗುರಿ ಸಾಧಿಸಲು ನಿರಂತರವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.
ಜೂನಿಯರ್ ಪವರ್ ಮ್ಯಾನ್ ಗಳ ಕರ್ತವ್ಯ ಹಾಗೂ ಲೈನ್ ಗಳ ಸಂರಕ್ಷಣೆ ಮಾಡುವ ಕುರಿತು ನಿವೃತ್ತ ಅಧೀಕ್ಷಕ ಎಂಜಿನಿಯರ್ ವೈರಮುಡಿ, ಟ್ರಾನ್ಸ್ ಫಾರ್ಮರ್ ನಿರ್ವಹಣೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಸಿ. ಮೋಹನ್ ಶಂಕರ್ ಹಾಗೂ ವಿದ್ಯುತ್ ಸುರಕ್ಷತೆ ಕುರಿತು ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಸ್. ವಿಶ್ವನಾಥ್ ಅವರು ತರಬೇತಿ ನೀಡಿದರು.ವಿವಿಧ ವಿಷಯಗಳ ತರಬೇತಿ:
6 ದಿನಗಳ ಪ್ರವೇಶಾತಿ ತರಬೇತಿಯಲ್ಲಿ ವಿದ್ಯುತ್ ಮಾಪಕಗಳು, ಬಿಲ್ಲಿಂಗ್, ದರ ನಿಗದಿ, ಎಸ್‌ಒಪಿ, ಅರ್ಥಿಂಗ್, ವಿದ್ಯುತ್ ಕಳ್ಳತನ ಪತ್ತೆ, ಸೇವಾ ನಿಯಮಗಳು ಒಳಗೊಂಡಂತೆ, ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು. ಇದಲ್ಲದೆ 220 ಕೆ.ವಿ ವಿದ್ಯುತ್ ಕೇಂದ್ರ, ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರ ಹಾಗೂ ಮೀಟರ್ ಪರೀಕ್ಷಾ ಪ್ರಯೋಗಾಲಯಗಳ ಭೇಟಿಗೂ ಅವಕಾಶ ನೀಡಲಾಗಿದೆ.ಸೆಸ್ಕ್ ತರಬೇತಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎನ್. ಜ್ಯೋತಿ, ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಜೆ.ಬಿ. ಯೋಗೇಗೌಡ ಮೊದಲಾದವರು ಇದ್ದರು.