ಕೆಜಿಎಫ್‌ನಲ್ಲಿ ಕೈಗಾರಿಕೆ ಕ್ರಾಂತಿ: ಶಾಸಕಿ

| Published : Aug 16 2024, 12:56 AM IST

ಸಾರಾಂಶ

ಸಹಸ್ರಾರು ಜನರ ತ್ಯಾಗ ಬಲಿದಾನಗಳಿಂದ ಲಭಿಸಿದ ಸ್ವಾತಂತ್ರ್ಯದ ಫಲವಾಗಿ ಇದುವರೆಗೆ ೭೮ ವಸಂತಗಳನ್ನು ಕಳೆದಿದ್ದು, ದೇಶವು ಅಭಿವೃದ್ಧಿ ಪಥದತ್ತ ಬಹುದೂರ ಸಾಗಿದೆ. ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ರಕ್ಷಣಾ ಕ್ಷೇತ್ರ, ಕೃಷಿ, ಬಾಹ್ಯಾಕಾಶ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಮುಂದುವರೆದಿದ್ದೇವೆ

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರದಲ್ಲಿ ಮುಂದಿನ ೧೦ ರಿಂದ ೧೫ ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯ ಕ್ರಾಂತಿ ಉಂಟಾಗಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್ ಆಶಾಭಾವನೆ ವ್ಯಕ್ತಪಡಿಸಿದರು. ನಗರಸಭಾ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೂರಾರು ಕಂಪನಿಗಳಿಗೆ ಅವಕಾಶ

ಸುಮಾರು ಒಂದು ಸಾವಿರ ಎಕರೆ ಜಾಗವಿರುವಂತಹ ಕೆಜಿಎಫ್‌ನಲ್ಲಿ ಕೈಗಾರಿಕೆಗಳು ಸ್ಥಾಪನೆ ಮಾಡಿ ಕೆಜಿಎಫ್ ನಗರದಲ್ಲಿ ಕೈಗಾರಿಕೆ ಕ್ರಾಂತಿ ಉಂಟಾಗಲಿದೆ, ನೂರಾರು ಕಂಪನಿಗಳು ಕೆಜಿಎಫ್ ನಗರದಲ್ಲಿ ಸಾವಿರಾರು ಕೋಟಿ ಬಂಡವಾಳ ಹೂಡಿ ಸಾವಿರಾರು ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಲಿದೆ ಎಂದರು.ಸಹಸ್ರಾರು ಜನರ ತ್ಯಾಗ ಬಲಿದಾನಗಳಿಂದ ಲಭಿಸಿದ ಸ್ವಾತಂತ್ರ್ಯದ ಫಲವಾಗಿ ಇದುವರೆಗೆ ೭೮ ವಸಂತಗಳನ್ನು ಕಳೆದಿದ್ದು, ದೇಶವು ಅಭಿವೃದ್ಧಿ ಪಥದತ್ತ ಬಹುದೂರ ಸಾಗಿದೆ. ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ರಕ್ಷಣಾ ಕ್ಷೇತ್ರ, ಕೃಷಿ, ಬಾಹ್ಯಾಕಾಶ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಮುಂದುವರೆದಿದ್ದೇವೆ. ರಾಷ್ಟ್ರದ ಪ್ರಗತಿ ಕೇವಲ ಒಬ್ಬ ವ್ಯಕ್ತಿಯಿಂದಾಗಲೀ, ಅಧಿಕಾರಿಗಳಿಂದಾಗಲೀ ಸಾಧ್ಯವಿಲ್ಲ, ಜನಸಾಮಾನ್ಯರು ಒಟ್ಟಾಗಿ ಕೈಜೋಡಿಸಿದಲ್ಲಿ ಸಾಂಘಿಕವಾಗಿ ಸಹಕಾರ ನೀಡಿದಲ್ಲಿ ಮಾತ್ರ ರಾಷ್ಟ್ರದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ಪೊಲೀಸ್‌ ಅಕಾಡೆಮಿ ಸ್ಥಾಪನೆ

ಕೆಜಿಎಫ್ ಎಸ್‌ಪಿ ಶಾಂತರಾಜು ಮಾತನಾಡಿ, ಭಗತ್‌ಸಿಂಗ್, ಲಾಲ್‌ಬಹದ್ದೂರ್ ಶಾಸ್ತ್ರಿ, ಅಂಬೇಡ್ಕರ್, ಜವಾಹರ್‌ಲಾಲ್ ನೆಹರು, ಬಾಲಗಂಗಾಧರ ತಿಲಕ್‌ರಂತಹ ಅದೆಷ್ಟೋ ಮಹನೀಯರ ತ್ಯಾಗ ಬಲಿದಾನಗಳ ಫಲವಾಗಿ ನಾವು ಇಂದು ಸ್ವಾತಂತ್ರ್ಯದಿಂದ ಬದುಕಲು ಸಾಧ್ಯವಾಗಿದೆ. ಶಾಸಕರು ಪೊಲೀಸ್ ಅಕಾಡೆಮಿಗೆ ೧೦೦ ಎಕರೆ ಜಾಗ ನೀಡಿದ್ದು ಮುಂದಿನ ದಿನಗಳಲ್ಲಿ ಕೆಜಿಎಫ್ ನಗರದಲ್ಲಿ ಒಂದು ಸಾವಿರ ಪೊಲೀಸ್‌ರಿಗೆ ಅಕಾಡೆಮಿಯಲ್ಲಿ ತರಬೇತಿ ನೀಡಲಿದೆ ಎಂದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ ತಹಸೀಲಾರ್ ಬಿ.ನಾಗವೇಣಿ, ತಾಪಂ ಇಓ ಮಂಜುನಾಥ್‌ಹರ್ತಿ, ಪೌರಾಯುಕ್ತ ಪವನ್‌ಕುಮಾರ್, ಡಿವೈಎಸ್‌ಪಿ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ಕೆಡಿಎ ಆಯುಕ್ತ ಕೆ.ಎನ್.ಧರ್ಮೇಂದ್ರ, ಶಿರಸ್ತೆದಾರಾದ ಮಂಜುನಾಥ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಇದ್ದರು.೪೦೦ ಕ್ಕೂ ಹೆಚ್ಚು ಮಕ್ಕಳಿಂದ ಸಾಂಸ್ಕೃತಿಕ ಕಾರ್‍ಯಕ್ರಮವು ನಡೆಯಿತು, ತಾಲೂಕಿನ ನಾನಾ ಶಾಲೆಗಳಿಂದ ಮಕ್ಕಳ ವಿವಿಧ ರಾಷ್ಟ್ರ ಭಕ್ತೀಯ ಗೀತೆಗಳಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.ನಗರಸಭೆ ಸದಸ್ಯರ ಆಕ್ಷೇಪ

ಶಾಸಕರು ಜನರಿಂದ ಆಯ್ಕೆಯಾದಂತೆ ನಾವು ಕೂಡ ಜನರಿಂದ ಮತ ಪಡೆದು ನಗರಸಭೆ ಸದಸ್ಯರಾಗಿದ್ದೇವೆ, ಪ್ರೋಟೋಕಾಲ್ ನಿಯಮಾನುಸಾರ ಸದಸ್ಯರಿಗೆ ವೇದಿಕೆಯಲ್ಲಿ ಕೂರಲು ಆಸನದ ವ್ಯವಸ್ಥೆ ಕೂಡ ಆಯೋಜಕರು ಮಾಡಿರಲಿಲ್ಲ, ಆಹ್ವಾನ ಪತ್ರಿಕೆಯಲ್ಲಿ ನಗರಸಭೆ ಸದಸ್ಯರ ಹೆಸರು ಇರಲಿಲ್ಲ, ೩೫ ಸದಸ್ಯರ ಪೈಕಿ ೨೫ ಕ್ಕೂ ಹೆಚ್ಚು ನಗರಸಭೆ ಸದಸ್ಯರ ಸ್ವಾತಂತ್ರ್ಯ ದಿನಾಚರಣೆ ಕಾರ್‍ಯಕ್ರಮಕ್ಕೆ ಗೈರಾಗಿದ್ದರು, ಕೆಲವು ಸದಸ್ಯರು ಆಸನದ ವ್ಯವಸ್ಥೆ ಇಲ್ಲದೆ ನಿಂತೇ ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಿದರು.