ಚಿಕ್ಕಮಗಳೂರುಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳ ಸಹಭಾಗಿತ್ವದಲ್ಲಿ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಘೋಷಣೆಯಡಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಮೂಲಸೌಕರ್ಯ ಹಾಗೂ ಆಧುನಿಕ ಕಲಿಕಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ ಮಾಡಿದ್ದಾರೆ.
- ಹೆಚ್ಚಿನ ದೇಣಿಗೆ ನೀಡಲು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ । ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳ ಸಹಭಾಗಿತ್ವದಲ್ಲಿ ‘ಉತ್ತಮ ಕಲಿಕೆ, ಉಜ್ವಲ ಭವಿಷ್ಯ’ ಘೋಷಣೆಯಡಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಉತ್ತಮ ಮೂಲಸೌಕರ್ಯ ಹಾಗೂ ಆಧುನಿಕ ಕಲಿಕಾ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ದಾನಿಗಳು ಹೆಚ್ಚಿನ ಪ್ರಮಾಣದಲ್ಲಿ ದೇಣಿಗೆ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ ಮಾಡಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಸೋಮವಾರ ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿ ಕುರಿತು ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಮಾಚಗೊಂಡನಹಳ್ಳಿ ಮತ್ತು ಆಲ್ದೂರು, ತರೀಕೆರೆ ತಾಲೂಕಿನ ಸೋಕ್ಕೆ, ನರಸಿಂಹ ರಾಜಪುರ ತಾಲೂಕಿನ ಬಾಳೆಹೊನ್ನೂರು, ಮೂಡಿಗೆರೆ ತಾಲೂಕಿನ ಗೋಣಿಬೀಡು, ಕೊಪ್ಪ ತಾಲೂಕಿನ ಬಾಳಗಡಿ ಹಾಗೂ ಕಡೂರು ತಾಲೂಕಿನ ನಿಡಘಟ್ಟ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ನವೀಕರಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಶಾಲೆಗಳನ್ನು ಮಾದರಿ ಶಿಕ್ಷಣ ಸಂಸ್ಥೆಗಳನ್ನಾಗಿ ರೂಪಿಸಲು ಅಗತ್ಯವಿರುವ ಕಟ್ಟಡ, ಕೊಠಡಿಗಳು, ಕಲಿಕಾ ಉಪಕರಣಗಳು, ಡಿಜಿಟಲ್ ಸೌಲಭ್ಯ ಹಾಗೂ ಇತರ ಮೂಲಸೌಕರ್ಯ ಒದಗಿಸುವಲ್ಲಿ ಖಾಸಗಿ ಸಂಸ್ಥೆಗಳ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದರು.ಪೂರ್ವ ಪ್ರಾಥಮಿಕದಿಂದ 5ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಮಾಡ ಲಾಗುತ್ತದೆ. 6ರಿಂದ 12ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಅಗತ್ಯ ಸಾಮರ್ಥ್ಯಾಭಿವೃದ್ಧಿ ತರಗತಿಗಳಿಗೂ ಒತ್ತು ನೀಡಲಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯು ವಂತಹ ಗುಣಮಟ್ಟದ ಶೈಕ್ಷಣಿಕ ಸೌಲಭ್ಯನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ದೇಣಿಗೆ ಅಗತ್ಯ:ಸರ್ಕಾರ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಸಿಕೊಳ್ಳಲು ವಿಶೇಷ ಪೋರ್ಟಲ್ ಬಿಡುಗಡೆ ಮಾಡಿದೆ. ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಕಂಪನಿಗಳಿಗೆ ಸಹ-ಬ್ರ್ಯಾಂಡಿಂಗ್ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶ ಜಿಲ್ಲೆಯ ಉದ್ಯಮಿಗಳು ಸದುಪಯೋಗಪಡಿಸಿಕೊಂಡು ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಬೇಕು. ಕೇವಲ ಸಾಂಕೇತಿಕ ನೆರವಿಗೆ ಸೀಮಿತವಾಗದೆ, ಶಾಲೆಗಳ ಅಗತ್ಯ ಗುರುತಿಸಿ ಕಟ್ಟಡ ನಿರ್ಮಾಣ, ತರಗತಿ ಕೊಠಡಿಗಳ ಅಭಿವೃದ್ಧಿ, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಇತರ ಮೂಲಸೌಕರ್ಯ ಕಲ್ಪಿಸಲು ಉದಾರವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡುವುದು ಎಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಕೈಗಾರಿಕೋದ್ಯಮಿಗಳು ಮತ್ತು ದಾನಿಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಕೊಡುಗೆ ಭವಿಷ್ಯದ ಪೀಳಿಗೆ ಅಭಿವೃದ್ಧಿಗೆ ನೆರವಾಗಲಿದೆ. ಆದ್ದರಿಂದ ಜಿಲ್ಲೆಯ ಪ್ರತಿಯೊಂದು ಕೆಪಿಎಸ್ ಶಾಲೆ ಅಗತ್ಯಗಳನ್ನು ಪರಿಶೀಲಿಸಿ, ಸಂಸ್ಥೆಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿನ ನೆರವು ನೀಡಲು ಮುಂದಾಗಬೇಕು ಎಂದು ಹೇಳಿದರು.ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಮ್ಮರಾಜು, ಡಯಟ್ ಪ್ರಾಂಶುಪಾಲ ಸುಂದರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಹಾಗೂ ವಿವಿಧ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.---ಬಾಕ್ಸ್---
ವಿದ್ಯಾ ಕಾಫಿ ವರ್ಕ್ಸ್ ಗೆ ಡಿಸಿ ಅಭಿನಂದನೆಈಗಾಗಲೇ ಆಲ್ದೂರಿನಲ್ಲಿ ಉನ್ನತೀಕರಿಸಲಾಗುತ್ತಿರುವ ಶಾಲೆ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ವಿದ್ಯಾ ಕಾಫಿ ವರ್ಕ್ಸ್ ಮಾಲೀಕರು ನೆರವು ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅಭಿನಂಧಿಸಿದರು. ಇದೇ ಮಾದರಿಯಲ್ಲಿ ಜಿಲ್ಲೆಯ ಇತರ ಕೈಗಾರಿಕೋದ್ಯಮಿಗಳು, ಕಾರ್ಪೊರೇಟ್ ಸಂಸ್ಥೆಗಳು ಹಾಗೂ ದಾನಿಗಳು ಉಳಿದ ಶಾಲೆಗಳ ಅಭಿವೃದ್ಧಿಗೂ ಸಹಕಾರ ನೀಡಬೇಕು. ಶಾಲೆಗಳ ವಿಸ್ತರಣೆ ಮತ್ತು ಅಭಿವೃದ್ಧಿಗೆ ಹೆಚ್ಚುವರಿ ಭೂಮಿಯನ್ನು ಒದಗಿಸಲು ಮುಂದೆ ಬರುವವರ ಜಮೀನನ್ನು ಸರ್ಕಾರದ ಹೆಸರಿನಲ್ಲಿ ನೋಂದಾಯಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.