ಸಾರಾಂಶ
ಉಡುಪಿ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗಣರಾಜ್ಯೋತ್ಸವ ನಡೆಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಧ್ವಜಾರೋಹಣ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಜಾಪ್ರಭುತ್ವ ಮತ್ತು ಸಮಾನತೆ ನಮ್ಮ ಸಂವಿದಾನದ ಮುಖ್ಯ ಆಶಯಗಳಾಗಿವೆ. ಆದರೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಸಾಕಷ್ಟು ಆಳವಾಗಿ ಬೇರೂರಿದ್ದರೂ, ಸಂಪೂರ್ಣ ಸಮಾನತೆ ಇನ್ನೂ ಸಾಧ್ಯವಾಗಿಲ್ಲ. ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಮುಂದೆ ಪ್ರಜಾಪ್ರಭುತ್ವಕ್ಕೂ ಧಕ್ಕೆಯಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.ಅವರು ಭಾನುವಾರ ನಗರದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯ ಜನತೆಗೆ ಸಂದೇಶ ನೀಡಿದರು.ದೇಶದ ಬಡಜನರ ದುಡಿಮೆ ಕೆಲವೇ ಶ್ರೀಮಂತರ ಕೈಗೆ ಸೇರುತ್ತಿದೆ. ಇದರಿಂದ ನಮ್ಮ ಸಂವಿಧಾನದ ಸಮಾನತೆಯ ಆಶಯವೂ ಈಡೇರುವುದಿಲ್ಲ. ಇಂದು ದೇಶದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ ಅದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ದೇಶದ ಆಸ್ತಿ ಆದಾಯ ಎಲ್ಲರಿಗೂ ಪಾಲು ಸಿಗಬೇಕು. ಈ ದಿಕ್ಕಿನಲ್ಲಿ ಹೆಚ್ಚಿನ ಪ್ರಯತ್ನ ಮಾಡೋಣ ಎಂದವರು ಕರೆ ನೀಡಿದರು.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿಯನ್ನು ತುಂಬಿದಾಗ ಮಾತ್ರ ಸಂವಿಧಾನದ ಸಮಾನತೆಯ ಆಶಯ ಈಡೇರುತ್ತದೆ. ಅದಕ್ಕಾಗಿ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರಲಾಯಿತು. ಶಕ್ತಿ ಯೋಜನೆಯಡಿ ಇದುವರೆಗೆ 365.42 ಕೋಟಿ ಮಹಿಳೆಯರು, ಪ್ರತಿತಿಂಗಳು ಗೃಹಲಕ್ಷ್ಮೀ ಗ್ಯಾರಂಟಿಯಡಿ 1.22 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.63 ಕೋಟಿಗೂ ಅಧಿಕ ಕುಟುಂಬಗಳು, ಅನ್ನಭಾಗ್ಯ ಯೋಜನೆಯಡಿ 1.19 ಕೋಟಿ ಪಡಿತರ ಚೀಟಿದಾರರು, ಯುವನಿಧಿ ಯೋಜನೆಯಡಿ1.65 ನಿರುದ್ಯೋಗಿ ಯುವಕರು ಲಾಭ ಪಡೆಯುತ್ತಿದ್ದಾರೆ ಎಂದು ಸಚಿವರು ಹೇಳಿದರು.ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯಲ್ಲಿ ಶೇ.30 ರಷ್ಟು ಅನೇಕ ದಾಖಲೆಗಳೇ ಇಲ್ಲ ಎಂಬ ದೂರು ಇದೆ. ಆದ್ದರಿಂದ ಇರುವ ದಾಖಲೆಗಳನ್ನು ತಹಸೀಲ್ದಾರ್‌ಗಳ ಕಚೇರಿಯಲ್ಲಿ ಡಿಜಿಟಲೀಕರಣ ಮಾಡುವ ಭೂಸುರಕ್ಷಾ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಎಸ್ಪಿ ಡಾ. ಅರುಣ್ ಕೆ., ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಮಿಥುನ್ ಎಚ್.ಎನ್., ಕಾರ್ಕಳ ವನ್ಯಜೀವಿ ಡಿ.ಎಫ್.ಒ. ಶಿವರಾಮ ಎಂ. ಬಾಬು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಇದ್ದರು.